ಉಡುಪಿ: ಕೋವಿಡ್-19ಗೆ ರವಿವಾರ ಎರಡು ಬಲಿ
ಉಡುಪಿ, ಜು.26: ಗಂಭೀರವಾದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತಿದ್ದ ಜಿಲ್ಲೆಯ ಇಬ್ಬರು ಹಿರಿಯ ನಾಗರಿಕರು ಕೋವಿಡ್-19 ಸೋಂಕಿಗೆ ಪಾಸಿಟಿವ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಮೃತಪಟ್ಟವರಲ್ಲಿ ಒಬ್ಬರು ಬೈಂದೂರಿನವರಾದರೆ, ಇನ್ನೊಬ್ಬರು ಉಡುಪಿಯ ಇಂದಿರಾನಗರದವರು ಎಂದು ತಿಳಿದುಬಂದಿದೆ. ಮಧುಮೇಹ, ಹೃದಯ ಸಮಸ್ಯೆ, ಕಿಡ್ನಿ ತೊಂದರೆ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತಿದ್ದ ಇಬ್ಬರೂ ಜಿಲ್ಲಾಸ್ಪತ್ರೆಗೆ ದಾಖಲಾಗಿ, ಕೋವಿಡ್‌ಗೆ ಪಾಸಿಟಿವ್ ಬಂದ ಬಳಿಕ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೆಂದು ತಿಳಿದುಬಂದಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೈಂದೂರಿನ 63 ವರ್ಷ ಪ್ರಾಯದ ಹಿರಿಯರು ನಿನ್ನೆ ರಾತ್ರಿ, ಇಂದಿರಾ ನಗರದ 68ರ ವ್ಯಕ್ತಿ ಇಂದು ಬೆಳಗ್ಗೆ ಮೃತಪಟ್ಟರು. ಇಬ್ಬರ ಅಂತ್ಯಕ್ರಿಯೆಗಳು ಕೋವಿಡ್ ಮಾರ್ಗಸೂಚಿಯಂತೆ ಬೈಂದೂರು ಮತ್ತು ಉಡುಪಿಯಲ್ಲಿ ನಡೆಯಿತು ಎಂದು ಗೊತ್ತಾಗಿದೆ.
ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 17ಕ್ಕೇರಿದೆ.
ಕುಂದಾಪುರ ಮತ್ತು ಕಲ್ಯಾಣಪುರಗಳ ಇಬ್ಬರು ಹಿರಿಯ ನಾಗರಿಕರು ಹೃದಯ ಸಮಸ್ಯೆ ಸೇರಿದಂತೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದವರು ಇಂದು ಮೃತಪಟ್ಟಿದ್ದು, ಇಬ್ಬರಿಗೂ ನಡೆಸಿದ ಕೋವಿಡ್ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ ಎಂದು ತಿಳಿದುಬಂದಿದೆ.