×
Ad

ಉಡುಪಿ: ಸಂಡೇ ಲಾಕ್‌ಡೌನ್‌ನಲ್ಲಿ ಹಸಿದವರಿಗೆ ಸ್ವಂತ ಖರ್ಚಿನಲ್ಲಿ ಊಟ ನೀಡುವ ಆಪ್ತ ಮಿತ್ರರು!

Update: 2020-07-26 18:20 IST

ಉಡುಪಿ, ಜು.26: ಸಂಡೇ ಲಾಕ್‌ಡೌನ್ ಬಂತೆಂದರೆ ಮನೆಯೊಳಗೆ ಕೂತು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿ ಸಮಯ ವ್ಯರ್ಥ ಮಾಡುವ ಯುವಜನತೆ ಇರುವ ಇಂದಿನ ಸಂದರ್ಭದಲ್ಲಿ, ಇಲ್ಲಿ ಆಪ್ತ ಮಿತ್ರರು ತಾವು ದುಡಿದ ಹಣದಿಂದ ಅನ್ನ ಆಹಾರ ಇಲ್ಲದೆ ಪರಿತಪಿಸುತ್ತಿರುವ ಅಸಹಾಯಕರಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟ ನೀಡುವ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಉಡುಪಿಯ ಅಂಬಲಪಾಡಿ ಸಮೀಪದ ಕಪ್ಪೆಟ್ಟುವಿನ ಸಚಿನ್ ಪೂಜಾರಿ (22) ಹಾಗೂ ನೆರೆಮನೆಯ ಶೀಶ ಆಚಾರ್ಯ(24) ಕಳೆದ ನಾಲ್ಕು ಸಂಡೇ ಲಾಕ್‌ಡೌನ್‌ನಲ್ಲಿ ಸುಮಾರು 500ಕ್ಕೂ ಅಧಿಕ ನಿಗರ್ತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

ಸಚಿನ್ ಉಡುಪಿಯ ಟ್ರಾವೆಲ್ಸ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಶೀಶ ಆಚಾರ್ಯ ವೆಲ್ಡಿಂಗ್ ಶಾಪ್‌ನಲ್ಲಿ ದುಡಿಯುತ್ತಿದ್ದಾರೆ. ಆರಂಭದ ಲಾಕ್ ಡೌನ್‌ನಲ್ಲಿ ಅನ್ನ ಆಹಾರದ ಇಲ್ಲದವರಿಗೆ ಹತ್ತಾರು ಸಂಘಸಂಸ್ಥೆಗಳು ಊಟ ನೀಡುವ ಕೆಲಸ ಮಾಡುತ್ತಿತ್ತು. ಆದರೆ ನಂತರ ಅದನ್ನು ನಿಲ್ಲಿಸಲಾಯಿತು. ಅದರಿಂದ ಈಗಿನ ಸಂಡೇ ಲಾಕ್‌ಡೌನ್‌ನಲ್ಲಿ ನಗರದಲ್ಲಿರುವ ಭಿಕ್ಷುಕರು, ನಿರ್ಗತಿಕರು ಮಧ್ಯಾಹ್ನ ಮತ್ತು ರಾತ್ರಿ ಊಟ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಅರಿತ ಈ ಸ್ನೇಹಿತರು, ತಾವು ದುಡಿದ ಹಣದಿಂದ ಮನೆಯಲ್ಲಿಯೇ ಊಟ ತಯಾರಿಸಿ ನಗರದಲ್ಲಿರುವ ನಿರ್ಗತಿಕರಿಗೆ ಊಟ ಹಂಚುತ್ತಿದ್ದಾರೆ. ತಮ್ಮ ದ್ವಿಚಕ್ರ ವಾಹನದಲ್ಲಿ ನಗರವನ್ನು ಸಂಚರಿಸಿ, ಮಧ್ಯಾಹ್ನ ಹಾಗೂ ರಾತ್ರಿ ಪ್ರತಿ ರವಿವಾರ 120-150 ಮಂದಿಗೆ ಊಟ ನೀಡುತ್ತಿದ್ದಾರೆ. ಇದಕ್ಕಾಗಿ ಪ್ರತಿ ರವಿವಾರ ಇವರು ತಮ್ಮ ಕೈಯಿಂದ 1200ರೂ.ವರೆಗೆ ಹಣ ವ್ಯಯಿಸುತ್ತಿದ್ದಾರೆ.

‘ಲಾಕ್‌ಡೌನ್ ಆರಂಭದಲ್ಲಿ ಬೇಕಾದಷ್ಟು ಸಂಘಸಂಸ್ಥೆಗಳು ಊಟ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಆದರೆ ನಿಗರ್ತಿಕರಿಗೆ ಊಟ ನೀಡುವವರಿಲ್ಲ. ಇದನ್ನು ಗಮನಿಸಿ, ನನ್ನ ಮನೆಯಲ್ಲಿ ತಾಯಿಯಿಂದ ಅನ್ನ, ಸಾರು, ಪಲ್ಯ ತಯಾರಿಸಿ, ಗೆಳೆಯನ ಜೊತೆಗೂಡಿ ನಗರದಲ್ಲಿ ಹಸಿದವರಿಗೆ ವಿತರಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಕೈಲಾದಷ್ಟು ಸೇವೆಯನ್ನು ಮಾಡುತ್ತಿದ್ದೇವೆ'
-ಸಚಿನ್ ಪೂಜಾರಿ ಕಪ್ಪೆಟ್ಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News