ದ.ಕ. ಜಿಲ್ಲೆಯಲ್ಲಿ ಕೋವಿಡ್‌ಗೆ ಮತ್ತೆ ಎಂಟು ಬಲಿ: ಮೂರೇ ದಿನದಲ್ಲಿ 24 ಮಂದಿ ಸಾವು
ಮಂಗಳೂರು, ಜು.26: ದ.ಕ. ಜಿಲ್ಲೆಯಲ್ಲಿ ಶುಕ್ರವಾರದಿಂದ ಸತತ ಎಂಟು ಮಂದಿಯಂತೆ ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ. ರವಿವಾರ ಮತ್ತೆ ಎಂಟು ಮಂದಿ ಸಾವಿಗೀಡಾಗಿ ಮೂರೇ ದಿನದಲ್ಲಿ 24 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 123ಕ್ಕೆ ಏರಿಕೆಯಾಗಿದೆ.
ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಹೊಸದಾಗಿ 199 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,811ಕ್ಕೆ ಏರಿಕೆಯಾಗಿದೆ. ಆತಂಕಕಾರಿ ವಿಚಾರವೆಂದರೆ ಇದೇ ಮೊದಲ ಬಾರಿಗೆ ಸೋಂಕಿನ ಮೂಲವೇ ಪತ್ತೆಯಾಗದವರ ಸಂಖ್ಯೆ (83) ರವಿವಾರ ಗರಿಷ್ಠ ಪ್ರಮಾಣಕ್ಕೇರಿದೆ. ಈ ಸಂಖ್ಯೆ ಶನಿವಾರ 70 ಇತ್ತು.
ಕೊರೋನ ಸೋಂಕಿನಿಂದ ಸಾವಿಗೀಡಾದ ಎಂಟು ಮಂದಿಯಲ್ಲಿ ಎಲ್ಲರೂ ಹಿರಿಯ ನಾಗರಿಕರೇ ಆಗಿದ್ದಾರೆ. ಏಳು ಮಂದಿ ಮಂಗಳೂರು ನಿವಾಸಿಗಳಾಗಿದ್ದರೆ, ಒಬ್ಬರು ಪುತ್ತೂರು ತಾಲೂಕಿನವರು. ಇವರಲ್ಲಿ ಏಳು ಮಂದಿ ಪುರುಷರು, ಒರ್ವ ಮಹಿಳೆ. ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲೇ ಸಾವಿಗೀಡಾಗಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಜಿಲ್ಲಾಡಳಿತ ಸರ್ವ ಕ್ರಮ ಕೈಗೊಂಡಿದೆ.
ಮಂಗಳೂರು ನಿವಾಸಿ 72, 71, 70, 70, 56, 55, 45 ವರ್ಷದವರು. ಪುತ್ತೂರಿನ 55 ವರ್ಷದ ಪುರುಷ ಕೊರೋನ ಸೋಂಕಿನೊಂದಿಗೆ ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಸೋಂಕು ಮೂಲ ಪತ್ತೆಯಾಗದವರೇ ಹೆಚ್ಚು: ಹೊಸದಾಗಿ ಸೋಂಕಿತರಾದ 199 ಮಂದಿಯಲ್ಲಿ 83 ಮಂದಿಗೆ ಸೋಂಕು ಎಲ್ಲಿಂದ ಹರಡಿದೆ ಎನ್ನುವುದೇ ಪತ್ತೆಯಾಗಿಲ್ಲ. ಇದುವರೆಗೆ ಈ ಸಂಖ್ಯೆ 40ರ ಆಸುಪಾಸಿನಲ್ಲಿತ್ತು. ಇದೀಗ ದಿಢೀರ್ ಏರಿಕೆಯಾಗಿದೆ. ಉಳಿದಂತೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 31 ಮಂದಿಗೆ, 73 ಐಎಲ್‌ಐ ಪ್ರಕರಣಗಳು, 10 ಸಾರಿ ಪ್ರಕರಣಗಳು ಪತ್ತೆಯಾಗಿವೆ.
90 ಮಂದಿ ಗುಣಮುಖ: ದ.ಕ. ಜಿಲ್ಲೆಯ ವಿವಿಧ ಆಸ್ಪತ್ರೆಗಳು, ಆರೋಗ್ಯ ಕೇಂದ್ರ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 90 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರ ಸಂಖ್ಯೆ 2,217ಕ್ಕೇರಿದೆ. ಜಿಲ್ಲೆಯಲ್ಲಿ 2,471 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.