ಚಾರುಕೊಟ್ಟಿಗೆಯಲ್ಲಿ ಚಿರತೆ ದಾಳಿಗೆ ಜಾನುವಾರು ಬಲಿ
ಕುಂದಾಪುರ, ಜು.26: ಕೆದೂರು- ಕೊರ್ಗಿ ಸಮೀಪದ ಚಾರುಕೊಟ್ಟಿಗೆ ಎಂಬಲ್ಲಿ ಚಿರತೆ ದಾಳಿಗೆ ಮೇಯಲು ಬಿಟ್ಟ ದನವೊಂದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಜು.25ರಂದು ಸಂಜೆ ವೇಳೆ ನಡೆದಿದೆ.
ಸ್ಥಳೀಯ ನಿವಾಸಿ ಗಿರಿಜಾ ಪೂಜಾರಿ ಎಂಬವರ ಮನೆಯ ದನವನ್ನು ಅಲ್ಲೇ ಸಮೀಪ ಮೇಯಲು ಬಿಟ್ಟಿದ್ದು, ಸಂಜೆ ಸಮೀಪದ ಹಾಡಿಯಲ್ಲಿ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಿರತೆ ದಾಳಿಯಿಂದಲೇ ದನ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಪರಿಸರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಹಲವು ದನ ಹಾಗೂ ನಾಯಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಇದರಿಂದ ಸ್ಥಳೀಯರು ಭೀತಿ ಪಡುವಂತಾಗಿದೆ. ಆದುದರಿಂದ ಚಿರತೆ ಓಡಾಟ ಇರುವಲ್ಲಿ ಅರಣ್ಯ ಇಲಾಖೆ ಕೂಡಲೇ ಬೋನು ಇರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
‘ಅರಣ್ಯ ಇಲಾಖೆ ಕುಂದಾಪುರ ವಲಯ ವ್ಯಾಪ್ತಿಯ ಹಲವು ಕಡೆಗಳಲ್ಲಿ ಚಿರತೆ ಹಾವಳಿ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈಗಾಗಲೇ ನಮ್ಮಲ್ಲಿರುವ ಮೂರು ಬೋನುಗಳ ಪೈಕಿ ಒಂದನ್ನು ಕೋಟೇಶ್ವರ ಕಾಗೇರಿ, ನೆರಳಕಟ್ಟೆ ಮತ್ತು ಆಲೂರಿನಲ್ಲಿ ಇರಿಸಲಾಗಿದೆ. ಇದೀಗ ಕಾಗೇರಿಯಲಿನ ಬೋನನ್ನು ಚಾರುಕೊಟ್ಟಿಗೆಯಲ್ಲಿ ಇರಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಪ್ರಾಕರ್ ಕುಲಾಲ್ ತಿಳಿಸಿದ್ದಾರೆ.