ಪಡುಬಿದ್ರಿ: ಸೀಲ್‌ಡೌನ್ ನಿಯಮ ಉಲ್ಲಂಘನೆ; ಗುಜರಾತ್ ಮೂಲದ ಕಂಪೆನಿ ವಿರುದ್ಧ ಪ್ರಕರಣ ದಾಖಲು
ಪಡುಬಿದ್ರಿ, ಜು.26: ಕೋವಿಡ್-19 ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸದೆ, ಸೀಲ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಇನ್ನಾ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಜರಾತಿ ಮೂಲದ ಕಂಪೆನಿಯೊಂದರ 13 ಮಂದಿ ವಿರುದ್ಧ ಶನಿವಾರ ಪಡುಬಿದ್ರಿ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಈ ಕಂಪೆನಿಯ ಒಟ್ಟು 63 ಮಂದಿ ನೌಕರರಿಗೆ ಕೋವಿಡ್ ಪಾಸಿಟಿವ್ ಆಗಿತ್ತು ಎಂದು ಹೇಳಲಾಗಿದೆ.
ಕಾರ್ಕಳ ತಾಲೂಕಿನ ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಜರಕಟ್ಟೆಯಲ್ಲಿ ಹೊರದೇಶಗಳಿಗೆ ರಫ್ತಾಗುವ ಪ್ಲಾಸ್ಟಿಖ್ ಬ್ಯಾಗ್‌ಗಳನ್ನು ತಯಾರಿಸುವ ಬ್ರೈಟ್ ಪ್ಲೆಕ್ಸ್ ಇಂಟರ್ ನ್ಯಾಷನಲ್ ಎಂಬ ಕಂಪೆನಿಯ ಕೆಲ ನೌಕರರಿಗೆ ಕೋವಿಡ್ ಸೋಂಕು ದೃಢಪಟ್ಟ ಕಾರಣ ಕಂಪೆನಿಯನ್ನು ಜು. 21 ರಂದು ಸೀಲ್‌ಡೌನ್ ಮಾಡಲಾಗಿತ್ತು. ಆದರೆ ಕಂಪೆನಿಯ ಕೆಲವರು ಸೀಲ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಬೇರೆಡೆ ತೆರಳಲು ಆಸ್ಪದ ನೀಡಿದ ಬಗ್ಗೆ ಇನ್ನ ಗ್ರಾಮ ಪಂಚಾಯಿತಿಗೆ ಬಂದ ದೂರಿನಂತೆ 24ರಂದು ಕಂಪೆನಿಗೆ ನೋಟಿಸ್ ನೀಡಲಾಗಿತ್ತು. ಅದೇ ದಿನ ಕೆಲವು ಕಾರ್ಮಿಕರನ್ನು ಕೋವಿಡ್ -19 ಪರೀಕ್ಷೆಗೂ ಒಳಪಡಿಸಲಾಗಿದ್ದು, 36 ಮಂದಿಗೆ ಸೋಂಕು ದೃಢಪಟ್ಟಿತ್ತು.
ನಿಯಮ ಉಲ್ಲಂಘಿಸಿ ಸೋಂಕು ಹರಡಲು ಕಂಪೆನಿಯ ಎ.ಕೆ ಬನ್ಸಾಲ್, ಅಂಕಿತ್‌ಕುಮಾರ್ ಬನ್ಸಾಲ್, ಅಭಿನವ್ ಕುಮಾರ್ ಬನ್ಸಾಲ್, ಮಹೇಂದ್ರ ಗಾಂಧಿ, ಟಿ.ಎಸ್ ಗುಪ್ತ, ಗಣೇಶ್ ಪೈ, ಅನಿಲ್ ಪಾಲನ್, ದುದೆರ್ ಶರ್, ಮುನ್ನಕುಮಾರ್, ಪ್ರತಾಪ್ ನ್ಯಾಯ್ಕ್, ಸಚಿನ್ ಕುಮಾರ, ಸಿಕಂದರ್ ರಾಯ್, ಬಬನ್ ನ್ಯಾಯ್ಕಾ ಕಾರಣವಾಗಿದ್ದಾರೆ ಎಂದು ಆರೋಪಿಸಿ ಕಾರ್ಕಳ ತಾಲೂಕು ಗ್ರಾಮೀಣ ಕೋವಿಡ್-19 ಜಾಗೃತ ದಳ ಅಧಿಕಾರಿ ಡಾ.ಹೆಚ್. ಸುಬ್ರಮಣ್ಯ ಪ್ರಸಾದ್ ಇಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅದರಲ್ಲೂ ದುದೆರ್‌ಶರ್, ಮುನ್ನಕುಮಾರ್, ಪ್ರತಾಪ್ ನ್ಯಾಯ್ಕ್, ಸಚಿನ್ ಕುಮಾರ, ಶಿಕಂದರ್ ರಾಯ್, ಬಬ್ಬನ್ ನ್ಯಾಯ್ಕ್ ಕಂಪೆನಿ ಆವರಣದಿಂದ ನಾಪತ್ತೆಯಾಗಿದ್ದು ಅವರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಸೋಂಕು 51 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ರವಿವಾರ ಕಂಪೆನಿಯ ಇನ್ನೂ 12 ಮಂದಿಯಲ್ಲಿ ಸೋಂಕು ದೃಢವಾಗಿದ್ದು, ಎಲ್ಲಾ ಸೇರಿ ಕಂಪೆನಿಯ ಒಟ್ಟು 63 ಮಂದಿಯಲ್ಲಿ ಸೋಂಕು ದೃಢವಾದಂತಾಗಿದೆ. ಸೋಂಕು ದೃಢಪಟ್ಟವರಲ್ಲಿ ಹೆಚ್ಚಿನ ಕಾರ್ಮಿಕರು ಕಂಪೆನಿಯ ಒಳಗೇ ಇರುವ ರೂಮ್‌ಗಳಲ್ಲಿ ವಾಸ್ತವ್ಯವಿದ್ದರು. ಉಳಿದವರು ಬೇರೆ ಬೇರೆ ಬಾಡಿಗೆ ರೂಂನಲ್ಲಿ ಇದ್ದರು ಎಂದು ತಿಳಿದುಬಂದಿದೆ.
ಕಂಪೆನಿಯ ಕಾರ್ಮಿಕರಲ್ಲಿ ಸೋಂಕು ದೃಢವಾಗಿರುವ ಪರಿಣಾಮ ಕಾಂಜರಕಟ್ಟೆ ಪೇಟೆ ಲಾಕ್‌ಡೌನ್ ಆಗಿ ಮಾರ್ಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದ ಪರಿಣಾಮ ಜುಲೈ 21ರಿಂದ ಪೇಟೆಯಲ್ಲಿರುವ ಹೋಟೆಲ್, ಸೇರಿದಂತೆ ಕೆಲ ದಿನಸಿ ಅಂಗಡಿಗಳು ಮುಚ್ಚಲ್ಪಟ್ಟಿವೆ.