ಯುಎಪಿಎ ಕಾಯ್ದೆಯಡಿ ಬಂಧಿತ ಗುಲ್ಫಿಶಾ ಫಾತಿಮಾ ಬಿಡುಗಡೆಗೆ ಹೋರಾಟಗಾರರು, ಚಿಂತಕರ ಆಗ್ರಹ

Update: 2020-07-26 15:27 GMT

ಹೊಸದಿಲ್ಲಿ, ಜು. 26: ದಿಲ್ಲಿಯಲ್ಲಿ ಈ ವರ್ಷ ಫೆಬ್ರವರಿಯಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರಿಂದ ಬಂಧಿತರಾಗಿರುವ ವಿದ್ಯಾರ್ಥಿನಿ ಹಾಗೂ ಸಮುದಾಯ ಶಿಕ್ಷಕಿ ಗುಲ್ಫಿಶಾ ಫಾತಿಮಾ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ವಿದ್ವಾಂಸರು, ಶಿಕ್ಷಣ ತಜ್ಞರು, ಹೋರಾಟಗಾರರು, ಲೇಖಕರು, ಪತ್ರಕರ್ತರು, ಕಲಾವಿದರು ಹಾಗೂ ವಕೀಲರು ಸೇರಿದಂತೆ ಹಲವು ಸಂಘಟನೆಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಫಾತಿಮಾ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿದ್ದು, ಪ್ರಸ್ತುತ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಉಮಾ ಚಕ್ರವರ್ತಿ, ರೂಪಾ ರೇಖಾ ವರ್ಮಾ, ಜಯಂತಿ ಘೋಷ್, ಆಯಿಷಾ ಫಾರೂಕಿ, ಮೇರಿ ಜೋನ್, ನಂದಿನಿ ಸುಂದರ್, ಕವಿತಾ ಕೃಷ್ಣನ್ ಹಾಗೂ ಪ್ರದೀಪ್ ಕೃಷೇನ್ ಸಹಿ ಮಾಡಿದ ಹೇಳಿಕೆಯಲ್ಲಿ ಸಂವಿಧಾನವನ್ನು ರಕ್ಷಿಸಲು ಧೈರ್ಯ ತೋರಿರುವ ಹಾಗೂ ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ಅನ್ನು ವಿರೋಧಿಸಿರುವ ಕಾರಣಕ್ಕೆ ಫಾತಿಮಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರತಿಪಾದಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸಿದ ಹಲವು ಮುಸ್ಲಿಮರು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಹೋರಾಟಗಾರರನ್ನು ಅಪರಾಧೀಕರಣಗೊಳಿಸಲು ಹಾಗೂ ಕಾರಾಗೃಹಕ್ಕೆ ತಳ್ಳಲು ಈ ಕಾನೂನನ್ನು ದಿಲ್ಲಿ ಪೊಲೀಸರು ಹಾಗೂ ಗೃಹ ಸಚಿವಾಲಯ ಬಳಸಿದೆ ಎಂದು ಅವರು ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.

ಜಗತ್ತಿನಾದ್ಯಂತ ಜೈಲುಗಳಲ್ಲಿ ದಟ್ಟಣೆ ಕಡಿಮೆಯಾಗುತ್ತಿರುವ ಸಂದರ್ಭ ಗುಲ್ಫಿಶಾ ಅವರು 100 ದಿನಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರನ್ನು 2020 ಎಪ್ರಿಲ್ 29ರಂದು ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಗುಲ್ಫಿಸಾ ಅವರಿಗೆ ಒಂದು ಪ್ರಕರಣದಲ್ಲಿ ಜಾಮೀನು ದೊರಕಿದ ಬಳಿಕ ಇನ್ನೊಂದು ಪ್ರಕರಣದಲ್ಲಿ ಬಂಧಿಸಲಾಯಿತು. ಇದು ಭಿನ್ನಮತೀಯರಿಗೆ ಕಿರುಕುಳ ನೀಡುವ ಪ್ರಯತ್ನ. ಗುಲ್ಫಿಶಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಸಾವಿರಾರು ಮಹಿಳೆಯರು ಸಾಮೂಹಿಕ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರೇರೇಪಣೆಯಾಯಿತು ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News