ಕೊರೋನ ಎಫೆಕ್ಟ್: ಆಸ್ಟ್ರೇಲಿಯ ವಲಸಿಗರ ಸಂಖ್ಯೆಯಲ್ಲಿ 2 ಲಕ್ಷಕ್ಕೂ ಅಧಿಕ ಕುಸಿತ

Update: 2020-07-26 15:55 GMT

ಮೆಲ್ಬೋರ್ನ್, ಜು.26: ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯವು 2020-21ರ ಸಾಲಿನಲ್ಲಿ ವಲಸಿಗರನ್ನು ತೆಗೆದುಕೊಳ್ಳುವ ಪ್ರಮಾಣದಲ್ಲಿ ಗಣನೀಯ ಕುಸಿತವಾಗಲಿದೆ. 2018-19ರ ಸಾಲಿನಲ್ಲಿ ಆಸ್ಟ್ರೇಲಿಯವು 2.32 ಲಕ್ಷ ವಲಸಿಗರನ್ನು ತೆಗೆದುಕೊಂಡಿದ್ದರೆ, 2020-21ರ ಸಾಲಿನಲ್ಲಿ ಕೇವಲ 31 ಸಾವಿರ ವಲಸಿಗರನ್ನಷ್ಟೇ ಆಸ್ಟ್ರೇಲಿಯ ಸ್ವೀಕರಿಸಲಿದೆ. ಆಸ್ಟ್ರೇಲಿಯದ ನೂತನ ನೀತಿಯಿಂದಾಗಿ ಆ ದೇಶಕ್ಕೆ ವಲಸೆ ಹೋಗಲು ಬಯಸಿರುವ ಸಾವಿರಾರು ಭಾರತೀಯರು ಬಾಧಿತರಾಗಲಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗಿರುವ ಪ್ರತಿಕೂಲ ಪರಿಣಾಮದಿಂದ ಆಸ್ಟ್ರೇಲಿಯ ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ. ಈ ಮಾರಕ ಸೋಂಕು ಹರಡುವುದನ್ನು ತಡೆಯಲು ಆಸ್ಟ್ರೇಲಿಯವು ಕಟ್ಟುನಿಟ್ಟಾಗಿ ವಿದೇಶಿಯರಿಗೆ ಪ್ರಯಾಣ ನಿಷೇಧ ವಿಧಿಸಿದೆ.

ಆಸ್ಟ್ರೇಲಿಯದ ಖಜಾನೆ ಇಲಾಖೆಯು ಗುರುವಾರ ಬಿಡುಗಡೆಗೊಳಿಸಲಾದ ಆಸ್ಟ್ರೇಲಿಯದ ಆರ್ಥಿಕ ಹಾಗೂ ಹಣಕಾಸು ವರದಿಯು, 2918-19ರ ಸಾಲಿನಲ್ಲಿ ಒಟ್ಟು ಸಾಗರೋತ್ತರ ದೇಶಗಳಿಂದ ವಲಸೆ (ಎನ್‌ಓಎಂ) ದೇಶಕ್ಕೆ ಆಗಮಿಸಿರುವ ವಲಸಿಗರ ಸಂಖ್ಯೆ 2018-19ರಲ್ಲಿ 2.32 ಲಕ್ಷ ಆಗಿದ್ದರೆ, 2019-20ರ ಸಾಲಿನಲ್ಲಿ 1.54 ಲಕ್ಷ ಆಗಿತ್ತು ಹಾಗೂ 2020-21ರ ಸಾಲಿನಲ್ಲಿ 31 ಸಾವಿರ ಆಗಲಿದೆ ಎಂದು ತಿಳಿಸಿದೆ.

ಆಸ್ಟ್ರೇಲಿಯದಲ್ಲಿ ಪ್ರಸಕ್ತ ಸುಮಾರು 7 ಲಕ್ಷ ಅನಿವಾಸಿ ಭಾರತೀಯರಿದ್ದಾರೆ. ಆಸ್ಟ್ರೇಲಿಯಕ್ಕೆ ಅತ್ಯಧಿಕ ಸಂಖ್ಯೆಯ ಪರಿಣತ ವಲಸಿಗರನ್ನು ನೀಡುತ್ತಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ ಕೂಡಾ ಒಂದಾಗಿದೆ. ಆಸ್ಟ್ರೇಲಿಯದ ವಿವಿಗಳಲ್ಲಿ ಸುಮಾರು 90 ಸಾವಿರ ಭಾರತೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News