ಬುಧವಾರ ರಫೇಲ್ ಯುದ್ಧ ವಿಮಾನ ಫ್ರಾನ್ಸ್ ನಿಂದ ಭಾರತಕ್ಕೆ

Update: 2020-07-26 16:31 GMT

ಹೊಸದಿಲ್ಲಿ, ಜು.26: ಕನಿಷ್ಟ 5 ರಫೇಲ್ ಯುದ್ಧವಿಮಾನಗಳು ಫ್ರಾನ್ಸ್‌ನಿಂದ ಸೋಮವಾರ ಭಾರತಕ್ಕೆ ಪ್ರಯಾಣ ಆರಂಭಿಸಿ ಬುಧವಾರ ಭಾರತ ತಲುಪಲಿದೆ. ಅಗತ್ಯಬಿದ್ದರೆ ಈ ಅತ್ಯಾಧುನಿಕ ಯುದ್ಧವಿಮಾನಗಳನ್ನು ವಾರದೊಳಗೆ ಕಾರ್ಯಾಚರಣೆಗೆ ನಿಯೋಜಿಸಬಹುದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ theprint.in ವರದಿ ಮಾಡಿದೆ.

  ಲಡಾಖ್ ಗಡಿ ಭಾಗದಲ್ಲಿ ಭಾರತ-ಚೀನಾ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಯುದ್ಧವಿಮಾನಗಳು ನಿರ್ಣಾಯಕ ಪಾತ್ರ ವಹಿಸಲಿದೆ. ರಫೇಲ್ ವಿಮಾನಗಳ ಹಾರಾಟ ಮತ್ತು ನಿರ್ವಹಣೆಗೆ ವಾಯುಪಡೆಯ 12 ಪೈಲಟ್‌ಗಳಿಗೆ ಸಂಪೂರ್ಣ ತರಬೇತಿ ನೀಡಲಾಗಿದೆ ಎಂದು ರಕ್ಷಣೆ ಮತ್ತು ಭದ್ರತೆ ವಿಭಾಗದ ಮೂಲಗಳು ತಿಳಿಸಿವೆ.

ಇತರ ಹಲವು ಪೈಲಟ್‌ಗಳೂ ಫ್ರಾನ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಒಪ್ಪಂದದ ಪ್ರಕಾರ ಫ್ರೆಂಚ್ ಅಧಿಕಾರಿಗಳು ಒಟ್ಟು 36 ಪೈಲಟ್‌ಗಳಿಗೆ ತರಬೇತಿ ನೀಡಬೇಕಿದ್ದು, ಇವರಲ್ಲಿ ಕೆಲವರಿಗೆ ಭಾರತದಲ್ಲಿ ತರಬೇತಿ ನೀಡಲಾಗುತ್ತದೆ. 2016ರ ಸೆಪ್ಟೆಂಬರ್‌ನಲ್ಲಿ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಫ್ರಾನ್ಸ್‌ನ ಢಸಾಲ್ಟ್ ಏವಿಯೇಷನ್ ಸಂಸ್ಥೆ ಭಾರತಕ್ಕೆ ಪ್ರತೀ ವರ್ಷ 12 ರಫೇಲ್ ಯುದ್ಧವಿಮಾನಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಕಳೆದ ವರ್ಷದ ಅಕ್ಟೋಬರ್‌ನಿಂದ ಇದುವರೆಗೆ ವಾಯುಪಡೆಗೆ 9 ವಿಮಾನಗಳನ್ನು ಹಸ್ತಾಂತರಿಸಿದೆ.

ಸಾಮಾನ್ಯ ಪರಿಸ್ಥಿತಿಯಲ್ಲಿ, ಯುದ್ಧ ವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಲು ಕನಿಷ್ಟ 6 ತಿಂಗಳ ಅವಧಿ ಬೇಕಾಗುತ್ತದೆ. ಆದರೆ ಇದು ಅಸಾಮಾನ್ಯ ಸಂದರ್ಭವಾಗಿರುವುದರಿಂದ ವಾರದೊಳಗೆ ಕಾರ್ಯಾಚರಣೆಗೆ ನಿಯೋಜಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News