​ಅಂತಿಮ ಪರೀಕ್ಷೆ ರದ್ದುಗೊಳಿಸಲು ಎನ್‌ಎಸ್‌ಯುಐ ಆಗ್ರಹ

Update: 2020-07-27 13:39 GMT

ಮಂಗಳೂರು, ಜು.27: ಉನ್ನತ ವ್ಯಾಸಾಂಗ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಎನ್‌ಎಸ್‌ಯುಐ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಆಗ್ರಹಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ವಿವಿಧ ಜಿಲ್ಲೆ ಮತ್ತು ಇತರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ಪೇಯಿಂಗ್ ಗೆಸ್ಟ್ಗಳಲ್ಲಿದ್ದುಕೊಂಡು ವ್ಯಾಸಾಂಗ ಮಾಡುತ್ತಿದ್ದಾರೆ. ಈಗ ಹಾಸ್ಟೆಲ್ ಹಾಗೂ ಪೇಯಿಂಗ್ ಗೆಸ್ಟ್ಗಳು ಕಾರ್ಯಾಚರಣೆ ಮಾಡುತ್ತಿಲ್ಲ. ಕೋವಿಡ್-19 ಕಾರಣದಿಂದ ಸರಕಾರ ವಿದ್ಯಾ ಸಂಸ್ಥೆಗಳಿಗೆ ರಜೆಯನ್ನು ಘೋಷಣೆ ಮಾಡಿದೆ. ರಾಜ್ಯಾದ್ಯಂತ ಲಾಕ್‌ಡೌನ್ ಕೂಡ ಆಗಿತ್ತು. ಮಾರ್ಚ್‌ನಲ್ಲಿ ಪರೀಕ್ಷೆ ಮಾಡಬಹುದಿತ್ತು. ಈಗ ಕೊರೋನ ವೈರಸ್ ರೋಗ ಉಲ್ಬಣಗೊಂಡ ಬಳಿಕ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಹಾಗಾಗಿ ಸರಕಾರ ಹಠಮಾರಿತನ ಕೈ ಬಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಬೇಕು ಎಂದು ಮನವಿ ಮಾಡಿದರು.

ಉನ್ನತ ವ್ಯಾಸಾಂಗ ಪರೀಕ್ಷೆಯನ್ನು ಸೆಪ್ಟೆಂಬರ್‌ನೊಳಗೆ ನಡೆಸಲು ಮುಂದಾಗಿರುವುದು ಸರಿಯಲ್ಲ. ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ನಿರ್ದೇಶಕರು ಕೂಡ ಸೆಪ್ಟೆಂಬರ್ ಅಂತ್ಯಕ್ಕೆ ಕೊರೋನ ದೇಶಾದ್ಯಂತ ಹರಡಿ ಗರಿಷ್ಠ ಮಟ್ಟಕ್ಕೆ ತಲುಪುತ್ತದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಸರಕಾರ ಮಾತ್ರ ಏಕಾಏಕಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಚೆಲ್ಲಾಟವಾಡಲು ಹೊರಟಿದೆ. ಎಲ್ಲ ಕೋರ್ಸುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಬೇಕಾಗಿದೆ. ಆದರೆ ಹೇಗೆ ಮತ್ತು ಯಾವಾಗ ಎಂಬುದರ ಬಗ್ಗೆ ರೂಪುರೇಷ ಸರಕಾರದ ಬಳಿ ಇಲ್ಲ ಎಂದು ಆರೋಪಿಸಿದರು.

ರಾಜ್ಯದ ಜನರ ಆರೋಗ್ಯ ಕಾಪಾಡುವ ಬಗ್ಗೆ ರೂಪು ರೇಷೆ ಸಿದ್ಧಪಡಿಸಬೇಕಿದ್ದ ಆರೋಗ್ಯ ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಇನ್ನೊಂದು ಕಡೆ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ಹರಡದಿರಲು ಯಾವುದೇ ಪೂರ್ವ ತಯಾರಿ ಮಾಡದೆ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಮೊಂಡುತನ ತೋರಿಸುವ ಶಿಕ್ಷಣ ಸಚಿವರು. ಇವರೊಳಗೆ ಯಾವುದೇ ಹೊಂದಾಣಿಕೆ ಇದ್ದಂತೆ ಕಂಡು ಬರುತ್ತಿಲ್ಲ. ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡಿದರೆ ಎನ್‌ಎಸ್‌ಯುಐ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ರಸ್ತೆಗೆ ಇಳಿದು ಹೋರಾಟ ಮಾಡಲು ಹೇಸುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸವಾದ್ ಗೂನಡ್ಕ, ಅನ್ವಿತ್ ಕಟೀಲ್, ಮುಲ್ಕಿ-ಮೂಡುಬಿದಿರೆ ಬ್ಲಾಕ್ ಅಧ್ಯಕ್ಷ ಭರತ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News