ಮಂಗಳೂರು: ಸಾವಯವ ತರಕಾರಿ ಕೃಷಿ ಘಟಕ ಉದ್ಘಾಟನೆ
ಮಂಗಳೂರು, ಜು.27: ಉಳ್ಳಾಲ ನಗರಸಭೆ, ಲಯನ್ಸ್ ಕ್ಲಬ್ ಮಂಗಳೂರು ಮತ್ತು ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಉಳ್ಳಾಲದ ಉಳಿಯ ಪರಿಸರದಲ್ಲಿ ಸಮುದಾಯ ಆಧಾರಿತ ಸಾವಯವ ತರಕಾರಿ ಕೃಷಿ ಘಟಕ ಉದ್ಘಾಟನೆಗೊಂಡಿತು.
ಈ ಸಂದರ್ಭ ಮಾತನಾಡಿದ ಲಯನ್ಸ್ ಜಿಲ್ಲಾ ಗೌರ್ನರ್ ಡಾ.ಗೀತಾ ಪ್ರಕಾಶ್, ಸೇವೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಅಗತ್ಯ. ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಡಿ, ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಮತ್ತು ಲಯನ್ಸ್ ಕ್ಲಬ್ ಕದ್ರಿಹಿಲ್ ಉಳ್ಳಾಲದ ಎಲ್ಲ ವಾರ್ಡ್‌ಗಳಲ್ಲಿ ನಡೆಯುವ ಸಮುದಾಯ ಆಧಾರಿತ ಸಾವಯವ ತರಕಾರಿ ಕೃಷಿ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡುತ್ತಿವೆ ಎಂದರು.
ಉಳ್ಳಾಲ ನಗರಸಭೆಯ ಪೌರಾಯುಕ್ತ ರಾಯಪ್ಪ ಮಾತನಾಡಿದರು. ಸಾವಯವ ತರಕಾರಿ ಕೃಷಿ ಅಭಿಯಾನದ ಕರಪತ್ರವನ್ನು ಉಳಿಯ ವಾರ್ಡ್‌ನ ಸದಸ್ಯ ವೀಣಾ ಡಿಸೋಜ ಬಿಡುಗಡೆಗೊಳಿಸಿದರು. ತರಕಾರಿ ಕೃಷಿ ಅಗತ್ಯದ ಬಗ್ಗೆ ಪ್ರಗತಿಪರ ಕೃಷಿಕ ವಿಜಯ್ ಕುಂದರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಂಕನಾಡಿಯ ಕೋಶಾಧಿಕಾರಿ ಮಾಧವ ಉಳ್ಳಾಲ್, ಮಾಜಿ ನಗರಸಭಾ ಸದಸ್ಯ ಸುಂದರ್ ಉಳಿಯ, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ವಿಟ್ಳ ಮಂಗೇಶ್ ಭಟ್, ಪ್ರವೀಣ್ ಶೆಟ್ಟಿ, ಮಂಜುಳಾ ಪಿ. ಶೆಟ್ಟಿ, ಸುಬ್ರಹ್ಮಣ್ಯ ಭಟ್ ಭಾಗವಹಿಸಿದ್ದರು. ನಿವೃತ್ತ ಶಿಕ್ಷಕ ಎಂ. ವಾಸುದೇವ ರಾವ್ ಸ್ವಾಗತಿಸಿದರು. ಮಂಗಳೂರು ರೋಶನಿ ನಿಲಯದ ವಿಸ್ತರಣಾ ವಿಭಾಗದ ನಿರ್ದೇಶಕ ಕಿಶೋರ್ ಅತ್ತಾವರ್ ವಂದಿಸಿದರು.