ಊಟ ಮಾಡಿದ ಬಳಿಕ ನ್ಯಾಯಾಧೀಶ, ಪುತ್ರ ಸಾವು
ಭೋಪಾಲ, ಜು.27: ಬೇತುಲ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಹೇಂದ್ರ ಕುಮಾರ್ ತ್ರಿಪಾಠಿ ಮತ್ತವರ ಪುತ್ರ ಶಂಕಿತ ಆಹಾರ ನಂಜಿನಿಂದಾಗಿ ಸಾವನ್ನಪ್ಪಿರುವುದಾಗಿ ಮಧ್ಯಪ್ರದೇಶದ ಪೊಲೀಸರು ಹೇಳಿದ್ದಾರೆ.
ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ತ್ರಿಪಾಠಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭ ಮೃತಪಟ್ಟರೆ ಅವರ ಪುತ್ರ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟರು. ತಾವು ಸೇವಿಸಿದ ಹಿಟ್ಟಿನಲ್ಲಿ ಸಮಸ್ಯೆಯಿತ್ತು ಎಂದು ತ್ರಿಪಾಠಿ ಹೇಳಿದ್ದರು. ಜುಲೈ 21ರಂದು ರಾತ್ರಿ ಪತ್ನಿ ತಯಾರಿಸಿದ ಊಟ ಸೇವಿಸಿದ ಬಳಿಕ ತಮ್ಮ ಆರೋಗ್ಯ ಹದಗೆಟ್ಟಿದೆ ಎಂದು ತ್ರಿಪಾಠಿ ಹೇಳಿರುವುದಾಗಿ ಬೇತುಲ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ವಿಜಯ್ ಪೂಂಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜುಲೈ 21ರಂದು ರಾತ್ರಿ ನ್ಯಾಯಾಧೀಶ ಹಾಗೂ ಇಬ್ಬರು ಪುತ್ರರು ಮನೆಯಲ್ಲಿ ಆಹಾರ ಸೇವಿಸಿದ ಬಳಿಕ ವಾಂತಿ ಮಾಡಲಾರಂಭಿಸಿದರು. ವೈದ್ಯರನ್ನು ಸಂಪರ್ಕಿಸಿದಾಗ ಅವರು ಕೆಲವು ಔಷಧಿ ಸೇವಿಸುವಂತೆ ಸೂಚಿಸಿದರು. ಆದರೂ ನ್ಯಾಯಾಧೀಶರ ಆರೋಗ್ಯ ಕ್ಷೀಣಿಸಲು ಆರಂಭಿಸಿತು. ಜುಲೈ 24ರಂದು ತ್ರಿಪಾಠಿಯನ್ನು ನಾಗ್‌ಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚಿಕಿತ್ಸೆ ಫಲಿಸದೆ ತ್ರಿಪಾಠಿ ಜುಲೈ 26ರಂದು ಮೃತಪಟ್ಟರೆ, ಅದೇ ದಿನ ಅವರ ಪುತ್ರನೂ ಸಾವನ್ನಪ್ಪಿದ್ದಾನೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದವರು ಹೇಳಿದ್ದಾರೆ.