×
Ad

ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ಗೆ ಮತ್ತೆ ನಾಲ್ಕು ಮಂದಿ ಬಲಿ

Update: 2020-07-27 21:30 IST

ಉಡುಪಿ, ಜು.27: ಜಿಲ್ಲೆಯಲ್ಲಿ ಸೋಮವಾರ ‘ಕೊರೋನ ಕಾಯಿಲೆ’ಯಿಂದಲೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದುವರೆಗೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತಿದ್ದು, ಕೊರೋನ ಸೋಂಕಿಗೆ ತುತ್ತಾಗಿ ಕಾಯಿಲೆ ಉಲ್ಬಣಗೊಂಡು ಮೃತಪಡುತಿದ್ದರೆ, ಇಂದು ಕಾರ್ಕಳ ತಾಲೂಕು ಕಡ್ತಲದ 60ರ ಹರೆಯ ವ್ಯಕ್ತಿಯೊಬ್ಬರು ಕೊರೋನಕ್ಕಾಗಿಯೇ ಚಿಕಿತ್ಸೆ ಪಡೆಯುತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಸೋಮವಾರ ಉಡುಪಿ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದರೆ, ರವಿವಾರ ರಾತ್ರಿ ಕುಂದಾಪುರದ ಮಹಿಳೆಯೊಬ್ಬರು ಬ್ರಹ್ಮಾವರದ ಆಸ್ಪತ್ರೆಗೆ ಕರೆತರುವಾಗ ಮೃತಪಟ್ಟಿದ್ದಾರೆ. ಶನಿವಾರ ಹೃದಯಾಘಾತದಿಂದ ಮೃತಪಟ್ಟ ನೇಜಾರಿನ ವ್ಯಕ್ತಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಕೊರೋನ ಸೋಂಕಿನಿಂದ ಒಟ್ಟು ಮೃತಪಟ್ಟವರ ಸಂಖ್ಯೆ 21ಕ್ಕೇರಿದೆ.

ಕಾರ್ಕಳ ತಾಲೂಕು ಕಡ್ತಲದ 60+ ಹರೆಯದ ವ್ಯಕ್ತಿ ಕೊರೋನದ ಲಕ್ಷಣದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಕ್ವಾರಂಟೈನ್‌ನಲ್ಲಿ ಚಿಕಿತ್ಸೆಯಲ್ಲಿದ್ದರು. ಅವರ ಮಾದರಿ ಪರೀಕ್ಷೆ ಪಾಸಿಟಿವ್ ಬಂದ ಬಳಿಕ ಅವರನ್ನು ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಬೆಳಗ್ಗೆ ಅವರು ಮೃತಪಟ್ಟರೆಂದು ತಿಳಿದುಬಂದಿದೆ.

ಕುಂದಾಪುರದ ಹಿರಿಯ ಮಹಿಳೆ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಕೊರೋನ ಪರೀಕ್ಷೆ ವೇಳೆ ಪಾಸಿಟಿವ್ ಬಂದ ಕಾರಣ, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆತರುತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟರು.

ಇನ್ನೊಬ್ಬರು ಕುಂದಾಪುರ ತಾಲೂಕು ಶಂಕರನಾರಾಯಣದವರಾಗಿದ್ದು ಅವರನ್ನು ಚಿಕಿತ್ಸೆಗಾಗಿ ಉಡುಪಿಗೆ ತರೆತರುತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದು, ಬಳಿಕ ಕೊರೋನ ಸೋಂಕಿನ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಕಂಡು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News