ಮೆಡಿಟರೇನಿಯನ್ ಸಮುದ್ರದಲ್ಲಿ 95 ವಲಸಿಗರು ಅಪಾಯದಲ್ಲಿ

Update: 2020-07-27 17:52 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜು. 27: ಸಂಘರ್ಷಪೀಡಿತ ಲಿಬಿಯದಿಂದ ತಪ್ಪಿಸಿಕೊಂಡಿರುವ ಸುಮಾರು 100 ವಲಸಿಗರು ಮೆಡಿಟರೇನಿಯನ್ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ ಹಾಗೂ ಅವರು ಮುಳುಗುವ ಅಪಾಯವೂ ಇದೆ ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ ಹಾಗೂ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಿದೆ.

ಬೇಸಿಗೆಯ ಆಗಮನ ಹಾಗೂ ಸಮುದ್ರದಲ್ಲಿನ ಹವಾಮಾನ ಪರಿಸ್ಥಿತಿಯು ಸುಧಾರಿಸಿರುವುದರಿಂದ ಹೆಚ್ಚೆಚ್ಚು ಜನರು ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸಬಹುದಾಗಿದೆ. ಲಿಬಿಯದಲ್ಲಿ ಪರಿಸ್ಥಿತಿ ಹದಗೆಟ್ಟಿರುವುದರಿಂದ ಅಲ್ಲಿಂದ ಹೆಚ್ಚು ಜನರು ಬೇರೆ ದೇಶಗಳಿಗೆ ಪಲಾಯನಗೈಯಬಹುದಾಗಿದೆ.

ಲಿಬಿಯದಿಂದ ತಪ್ಪಿಸಿಕೊಂಡಿರುವ ಸುಮಾರು 95 ವಲಸಿಗರು ಮೆಡಿಟರೇನಿಯನ್ ಸಮುದ್ರದ ಮಧ್ಯ ಭಾಗದಲ್ಲಿ ಈಗಲೂ ತೇಲುತ್ತಿದ್ದಾರೆ ಹಾಗೂ ಅವರು ಮುಳುಗುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಗೆ ಸೇರಿದ ಅಂತರ್‌ರಾಷ್ಟ್ರೀಯ ವಲಸಿಗರ ಸಂಘಟನೆ ಟ್ವೀಟ್ ಮಾಡಿದೆ.

ಅದು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ, ‘‘ಸಮುದ್ರದಲ್ಲಿ ಸಂಕಷ್ಟದ ಪರಿಸ್ಥಿತಿಗಳು ಉಂಟಾದಾಗ ಅವುಗಳಿಗೆ ಸ್ಪಂದಿಸುವ ಕಾನೂನು ಹಾಗೂ ನೈತಿಕ ಬದ್ಧತೆ ಸರಕಾರಗಳು ಮತ್ತು ಹಡಗಿನ ಮಾಲೀಕರುಗಳಿಗಿದೆ’’ ಎಂದು ಹೇಳಿದೆ.

ಕಳೆದ ವರ್ಷದಲ್ಲಿ ಒಂದು ಲಕ್ಷಕ್ಕೂ ಅಧಿಕ ವಲಸಿಗರು ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸಿದ್ದಾರೆ ಎಂದು ಸಂಘಟನೆ ತಿಳಿಸಿದೆ. ಈ ಪ್ರಯತ್ನದಲ್ಲಿ 1,200ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News