ಅತ್ಯಂತ ಭೀಕರ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ: ವಿಶ್ವ ಆರೋಗ್ಯ ಸಂಸ್ಥೆ

Update: 2020-07-27 17:58 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜು. 27: 1.6 ಕೋಟಿಗೂ ಹೆಚ್ಚಿನ ಜನರಿಗೆ ಸೋಂಕು ಉಂಟು ಮಾಡಿರುವ ಕೊರೋನ ವೈರಸ್ ಸಾಂಕ್ರಾಮಿಕವು ವಿಶ್ವ ಆರೋಗ್ಯ ಸಂಸ್ಥೆಯು ಈವರೆಗೆ ಎದುರಿಸಿರುವ ಅತ್ಯಂತ ಭೀಕರ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿದೆ ಎಂದು ಅದರ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಸೋಮವಾರ ಹೇಳಿದ್ದಾರೆ.

ಮುಖಗವಸುಗಳನ್ನು ಧರಿಸುವುದು ಮತ್ತು ಜನಜಂಗುಳಿಯಿಂದ ದೂರವಿರುವುದು ಮುಂತಾದ ಆರೋಗ್ಯ ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಈ ಸಾಂಕ್ರಾಮಿಕವನ್ನು ನಿಭಾಯಿಸಲು ಜಗತ್ತಿಗೆ ಸಾಧ್ಯವಾಗಬಹುದು ಎಂದು ಜಿನೀವದಲ್ಲಿ ನಡೆಸಿದ ಅಶರೀರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

‘‘ಈ ನಿಯಮಗಳನ್ನು ಅನುಸರಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಅನುಸರಿಸದಿದ್ದರೆ ಹೆಚ್ಚಾಗುತ್ತದೆ’’ ಎಂದು ಅವರು ಹೇಳಿದರು.

ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿರುವುದಕ್ಕಾಗಿ ಅವರು ಕೆನಡ, ಚೀನಾ, ಜರ್ಮನಿ ಮತ್ತು ದಕ್ಷಿಣ ಕೊರಿಯವನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News