ಹೆಲ್ಮೆಟ್ ಧರಿಸಿಲ್ಲ ಎಂದು ಯುವಕನ ಹಣೆಗೆ ಬೈಕ್‍ನ ಕೀಯಿಂದ ಇರಿದ ಪೊಲೀಸರು!

Update: 2020-07-28 08:14 GMT

ಡೆಹ್ರಾಡೂನ್ : ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಯುವಕನೊಬ್ಬನ ಹಣೆಗೆ ಬೈಕಿನ ಕೀಯಿಂದ ಇರಿದ ಘಟನೆ ಉತ್ತರಾಖಂಡದಲ್ಲಿ ನಡೆದಿದ್ದು, ಇಲಾಖೆಯ ನಗರ ಗಸ್ತು ಘಟಕದ ಮೂವರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರ ಎಂಬಲ್ಲಿ ಸೋಮವಾರ ಸಂಜೆ ತನ್ನ ಬೈಕ್‍ ನಲ್ಲಿ ಸ್ನೇಹಿತ ಜತೆ ಸಾಗುತ್ತಿದ್ದ ಯುವಕನನ್ನು ಕರ್ತವ್ಯದಲ್ಲಿದ್ದ ಮೂವರು ಪೊಲೀಸರು ತಡೆದು  ಏಕೆ ಹೆಲ್ಮೆಟ್ ಧರಿಸಿಲ್ಲ ಎಂದು ಪ್ರಶ್ನಿಸಿದ್ದರು.

ನಂತರ  ಪೊಲೀಸರು ಮತ್ತು ಯುವಕನ ನಡುವಿನ ವಾಗ್ವಾದ ತಾರಕಕ್ಕೇರುತ್ತಿದ್ದಂತೆಯೇ ಪೊಲೀಸರು ಆತನ ಬೈಕ್  ಕೀ ತೆಗೆದು ಅದರಿಂದಲೇ ಆತನ ಹಣೆಗೆ ಇರಿದಿದ್ದರು ಎಂದು ಆರೋಪಿಸಲಾಗಿದೆ.

ಯುವಕನ  ಹಣೆಗೆ ಇರಿಯಲ್ಪಟ್ಟ ಬೀಗದ ಕೈ ಹಾಗೂ ರಕ್ತ ಒಸರುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು  ಮೂವರು ಆರೋಪಿ ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ.

ಈ ಘಟನೆ ಸ್ಥಳದಲ್ಲಿ ಪ್ರತಿಭಟನೆಗಳಿಗೂ ಕಾರಣವಾಗಿ ಒಬ್ಬ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಕೊನೆಗೆ ಸ್ಥಳೀಯ ಶಾಸಕ ರಾಜಕುಮಾರ್ ತುಕ್ರಲ್ ಮಧ್ಯ ಪ್ರವೇಶಿಸಿ ಉದ್ರಿಕ್ತ ಜನರನ್ನು ಸಮಾಧಾನ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News