ಚುನಾವಣೆಯ ಕುರಿತು ಜಮ್ಮು-ಕಾಶ್ಮೀರದ ಲೆ.ಗವರ್ನರ್ ಹೇಳಿಕೆಗೆ ಚುನಾವಣಾ ಆಯೋಗ ಆಕ್ಷೇಪ
Update: 2020-07-28 15:09 IST
ಹೊಸದಿಲ್ಲಿ, ಜು.28: ಚುನಾವಣೆಗಳ ಸಮಯದ ಕುರಿತು ಭಾರತದ ಚುನಾವಣಾ ಆಯೋಗ ಮಾತ್ರ ನಿರ್ಧರಿಸಲಿದೆ ಎಂದು ಚುನಾವಣಾ ಆಯೋಗ ಮಂಗಳವಾರ ಸ್ಪಷ್ಟಪಡಿಸಿದೆ.
ಈಗ ನಡೆಯುತ್ತಿರುವ ಗಡಿ ನಿರ್ಧಾರದ ಕುರಿತ ಕಾರ್ಯಗಳು ಮುಗಿದ ತಕ್ಷಣವೇ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆಗಳು ನಡೆಯಲಿದೆ ಎಂಬ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಜಿಸಿ ಮುರ್ಮು ಹೇಳಿಕೆಗೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಚುನಾಯಿತ ಸರಕಾರ ಪತನಗೊಂಡ ಬಳಿಕ ಜಮ್ಮು-ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ. ಚುನಾವಣೆ ನಡೆಸಲು ಆಯೋಗವು ಭದ್ರತಾ ಆತಂಕ ವ್ಯಕ್ತಪಡಿಸಿತ್ತು.
ಚುನಾವಣಾ ಆಯೋಗದ ಹೊರತಾದ ಅಧಿಕಾರಿಗಳು ಚುನಾವಣಾ ಆಯೋಗದ ಸಾಂವಿಧಾನಿಕ ಆದೇಶಕ್ಕೆ ಮಧ್ಯಪ್ರವೇಶಿಸುವುದಕ್ಕೆ ಸಮನಾಗಿರುವ ಇಂತಹ ಹೇಳಿಕೆ ನೀಡುವುದರಿಂದ ದೂರ ಇರುವುದು ಸೂಕ್ತವಾಗಿದೆ ಎಂದು ಆಯೋಗ ತಿಳಿಸಿದೆ.