ಮಾಹೆ ಟ್ರಸ್ಟ್ ಅಧ್ಯಕ್ಷರಾಗಿ ಡಾ.ರಂಜನ್ ಪೈ
ಉಡುಪಿ, ಜು.28: ಮಣಿಪಾಲದ ಡಾ.ರಂಜನ್ ಆರ್. ಪೈ ಅವರು ಮಾಹೆ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ತನ್ನ ತಂದೆ ಡಾ.ರಾಮದಾಸ ಎಂ.ಪೈ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. ಡಾ.ರಾಮದಾಸ ಪೈ ಅವರು ಸುದೀರ್ಘ 27 ವರ್ಷಗಳ ಕಾಲ ಮಾಹೆ ಟ್ರಸ್ಟ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಡಾ.ರಂಜನ್ ಪೈ ಈಗಾಗಲೇ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ರಿಜಿಸ್ಟ್ರಾರ್ ಆಗಿಯೂ ಕಾರ್ಯನಿರ್ವಹಿಸುತಿದ್ದಾರೆ. ಕರಾವಳಿಯ ಜನತೆಗೆ ಶಿಕ್ಷಣ, ಆರೋಗ್ಯ ಹಾಗೂ ಕೌಶಲ್ಯವನ್ನು ಒದಗಿಸುವ ಉದ್ದೇಶದಿಂದ ಡಾ.ಪೈ ಅವರ ಅಜ್ಜ ಡಾ.ಟಿಎಂಎ ಪೈ, 1942ರಲ್ಲಿ ಮಣಿಪಾಲ ಗ್ರೂಪ್‌ನ ಸಂಸ್ಥೆಗಳನ್ನು ಪ್ರಾರಂಭಿಸಿದ್ದರು.
ಮಣಿಪಾಲ ಗ್ರೂಪ್‌ನ ಎಲ್ಲಾ ಸಂಸ್ಥೆಗಳಿಗೆ ಮಾತೃಸಂಸ್ಥೆ ಎನಿಸಿರುವ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ರಿಜಿಸ್ಟ್ರಾರ್ ಆಗಿ ಡಾ.ರಾಮದಾಸ ಪೈ ಅವರು 2009ರಿಂದ 2018ರವರೆಗೆ ಕಾರ್ಯನಿರ್ವಹಿಸಿದ್ದರು. ಕಳೆದ ಎರಡು ದಶಕ ಗಳಿಂದ ತನ್ನ ತಂದೆಯೊಂದಿಗೆ ಅವರ ಎಲ್ಲಾ ಸಾಹಸಗಳಲ್ಲೂ ನಿಕಟವಾಗಿ ಕೆಲಸ ಮಾಡಿದ್ದ ಡಾ.ರಂಜನ್ ಪೈ, 2004ರಿಂದ ಮಾಹೆ ಟ್ರಸ್ಟ್ ಹಾಗೂ ಮಾಹೆ ಆಡಳಿತ ಮಂಡಳಿ ಸದಸ್ಯರಾಗಿ ಆಡಳಿತದಲ್ಲಿ ಸಾಕಷ್ಟು ಅನುಭವವನ್ನು ಪಡೆದಿದ್ದಾರೆ.