ಮಲ್ಪೆ ಠಾಣೆಯನ್ನು ಸ್ವಚ್ಛಗೊಳಿಸುವ ಮೂಲಕ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಸ್ವಚಂ ಕ್ಲೀನಿಂಗ್
ಉಡುಪಿ, ಜು.28: ಕೋವಿಡ್-19 ವಿರುದ್ಧ ಹೋರಾಟದಲ್ಲಿ ಮುಂಚೂಣಿ ಯಲ್ಲಿರುವ ಪೋಲೀಸ್ ಇಲಾಖೆಯ ಸೇವೆಗೆ ಕೃತಜ್ಞತೆ ಸಲ್ಲಿಸಲು ಹಾಗೂ ಪೋಲೀಸ್ ಸಿಬ್ಬಂದಿಗಳ ಆರೋಗ್ಯದ ಸುರಕ್ಷತೆಯ ನಿಟ್ಟಿನಲ್ಲಿ ಸ್ವಚಂ ಕ್ಲೀನಿಂಗ್ ಸರ್ವೀಸಸ್ ಸಂಸ್ಥೆಯ ವತಿಯಿಂದ ಇಂದು ಮಲ್ಪೆ ಪೊಲೀಸ್ ಠಾಣೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಲಾಯಿತು.
ರೋಟರಿ ಕಲ್ಯಾಣಪುರದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಲ್ಪೆ ಠಾಣಾಧಿಕಾರಿ ತಿಮ್ಮೇಶ್ ಉದ್ಘಾಟಿಸಿದರು. ಸ್ವಚಂ ಕ್ಲೀನಿಂಗ್ ಸರ್ವೀಸಸ್ ಸಂಸ್ಥೆಯ ಮಾಲಕ ತಾರಾನಾಥ್ ಪೂಜಾರಿ ಮಾತನಾಡಿ, ನಮಗಾಗಿ ಹಗಲಿರುಳು ದುಡಿಯುತಿರುವ ಪೋಲೀಸ್ ಸಿಬ್ಬಂದಿಗಳ ರಕ್ಷಣೆಗಾಗಿ ಹಾಗೂ ಅವರ ಸೇವೆಗೆ ನಮ್ಮ ಮೆಚ್ಚುಗೆ ತೋರಲು ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ. ಸಂಪೂರ್ಣ ಪೋಲೀಸ್ ಠಾಣೆಯನ್ನು ಸೂಕ್ತ ಸ್ಪ್ರೇ ಹಾಗೂ ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಲ್ಯಾಣಪುರ ಅಧ್ಯಕ್ಷ ಡೆಸ್ಮಂಡ್ ವಾಜ್, ಮಾಜಿ ಅಧ್ಯಕ್ಷ ರಾಮ ಪೂಜಾರಿ, ಮಾಜಿ ಸಹಾಯಕ ಗವರ್ನರ್ ಎಂ.ಮಹೇಶ್ ಕುಮಾರ್, ಸುನಿಲ್ ಪೂಜಾರಿ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.