ಮಲ್ಪೆ ರಾ.ಹೆದ್ದಾರಿ ಭೂಸ್ವಾಧೀನಕ್ಕೆ ಗೆಜೆಟ್ ನೋಟಿಫಿಕೇಶನ್
ಉಡುಪಿ, ಜು.28: ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 (ಎ)ರ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ ಒಟ್ಟು 6 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಪಡಿಸಲು ಭೂಸ್ವಾಧೀನಕ್ಕೆ ಕೇಂದ್ರ ಸರಕಾರ 3ಎ ನಲ್ಲಿ ೆಜೆಟ್ ನೋಟಿಫಿಕೇಶನ್ ಹೊರಡಿಸಿದೆ.
ಆದಿ ಉಡುಪಿಯಿಂದ-ಮಲ್ಪೆವರೆಗೆ 100 ಅಡಿ ಅಗಲದ 6 ಕಿ.ಮೀ. ರಸ್ತೆಯ ಭೂಸ್ವಾಧೀನಕ್ಕೆ 3ಎ ನಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಅಂಬಲಪಾಡಿ, ಕೊಡವೂರು ಮತ್ತು ಮೂಡನಿಡಂಬೂರು ಗ್ರಾಮಗಳ 206 ಸರ್ವೆ ನಂಬರ್ಗಳ ಒಟ್ಟು 6.1598 ಹೆಕ್ಟೇರು ಭೂಮಿ ಈ ರಸ್ತೆ ಅಗಲಗೊಳಿ ಸಲು ಬಳಕೆಯಾಗಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಈ ರಸ್ತೆ ವಿಸ್ತರಣೆಗೆ 75 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ ಸುಮಾರು 50 ಕೋಟಿ ರೂ. ರಸ್ತೆಗೆ ಮತ್ತು ಉಳಿದ 25 ಕೋಟಿ ರೂ. ಪರಿಹಾರ ನೀಡಲು ಬಳಕೆಯಾಗಲಿದೆ. ಪ್ರಸ್ತುತ 3ಎ ನೋಟಿಫಿಕೇಶನ್ ಆಗಿದ್ದು, ಶೀಘ್ರ 3ಡಿ ನೋಟಿಫಿಕೇಶನ್ ಆಗಲಿದೆ. ಆ ನಂತರ ಅಗತ್ಯ ಇರುವ ಜಮೀನನ್ನು ಸ್ವಾಧೀನಪಡಿಸಲಾಗುತ್ತದೆ.
ಜಮೀನಿಗೆ ನೋಂದಾಯಿತ ಮೌಲ್ಯಕ್ಕಿಂತ ಎರಡು ಪಟ್ಟು ಪರಿಹಾರ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸರ್ವಋತು ಮೀನುಗಾರಿಕಾ ಬಂದರು, ಪ್ರವಾಸಿ ತಾಣ ಮಲ್ಪೆ ಸೈಂಟ್ ಮೇರಿಸ್ ದ್ವೀಪ, ಮಲ್ಪೆಕಡಲ ತೀರವನ್ನು ಸಂಪರ್ಕಿಸುವ ರಸ್ತೆ ತೀರ ಇಕ್ಕಟ್ಟಾಗಿದ್ದು, ವಾಹನ ದಟ್ಟಣೆಯಿಂದ ಪ್ರತಿದಿನ ಸಮಸ್ಯೆ ಉಂಟಾಗುತ್ತಿತ್ತು