ಶಕ್ತಿ ಪಿಯು ಕಾಲೇಜಿನಿಂದ ‘ಆನ್‌ಲೈನ್ ಶಿಕ್ಷಣ’ ಕುರಿತ ವೆಬಿನಾರ್

Update: 2020-07-28 13:30 GMT

ಮಂಗಳೂರು, ಜು.28: ನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಿಂದ ರಾಜ್ಯದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೋವಿಡ್-19ರ ಸಮಯದಲ್ಲಿ ಹೊಸ ವಿಧಾನದ ಕಲಿಕೆಯ ಆನ್‌ಲೈನ್ ಶಿಕ್ಷಣದ ಬಗ್ಗೆ ನಾಲ್ಕು ದಿನಗಳ ಉಚಿತ ವೆಬಿನಾರ್ ಆರಂಭಗೊಂಡಿದ್ದು, ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಸಂಜೀತ್ ನಾಕ್ ವೆಬಿನಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಸಂಜೀತ್ ನಾಕ್, ಶಕ್ತಿ ಶಿಕ್ಷಣ ಸಂಸ್ಥೆಯು ಆನ್‌ಲೈನ್ ಮೂಲಕ ಅನೇಕ ದಿನಗಳಿಂದ ಹೊಸ ಹೊಸ ಪ್ರಯೋಗವನ್ನು ಮಾಡುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಯ ವಿಧಾನವನ್ನು ಪರಿಚಯಿಸುವ ಕಾರ್ಯಕ್ರಮದ ಕುರಿತಂತೆ ಮಾಹಿತಿ ನೀಡಿದರು.

 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಬಿಎಸ್‌ಬಿಎಸ್ ಕಾಲೇಜಿನ ಉಪಾಧ್ಯಕ್ಷ ವಿನಯ್ ಜಾಧವ್ ಮಾತನಾಡಿ, ಕೋವಿಡ್-19ರ ಸಮಯದಲ್ಲಿ ಹೆದರಿಕೆಯಿಂದ ಯಾರೂ ಜೀವನ ನಡೆಸಬಾರದು. ಧೈರ್ಯದಿಂದ ಮುಂದಿನ ಶಿಕ್ಷಣ ಪೂರೈಸಬೇಕು. ಇದಕ್ಕಾಗಿ ಹೊಸ ವಿಧಾನದ ಕಲಿಕೆಗೆ ಎಲ್ಲರೂ ತಯಾರಿ ನಡೆಸಬೇಕು ಎಂದರು.

ರಾಜ್ಯದ ಸುಮಾರು ವಿವಿಧ ಶಾಲೆಗಳ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿಯಿಂದ ಈ ವೆಬಿನಾರ್‌ನಲ್ಲಿ ಭಾಗವಹಿಸಿದರು. ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತ ನಿರ್ದೇಶಕ ಡಾ. ಕೆ.ಸಿ ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಮತ್ತಿತರರು ಇದ್ದರು.

ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್. ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶಿಲ್ಪಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News