×
Ad

ಉಡುಪಿ: ಕೊರೋನಕ್ಕೆ ಜಿಲ್ಲೆಯಲ್ಲಿ 24ನೇ ವ್ಯಕ್ತಿ ಸಾವು

Update: 2020-07-28 19:39 IST

ಉಡುಪಿ, ಜು.28:ನೋವೆಲ್ ಕೊರೋನಕ್ಕೆ ಪಾಸಿಟಿವ್ ಬಂದ ಉಡುಪಿ ಜಿಲ್ಲೆಯ ಒಟ್ಟು 24 ಮಂದಿ ಇಂದು ಸಂಜೆಯವರೆಗೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ. ಮಂಗಳವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಕಳ ತಾಲೂಕು ಅಜೆಕಾರು ಗ್ರಾಮದ ಎಣ್ಣೆಹೊಳೆಯ ವ್ಯಕ್ತಿಯೊಬ್ಬರು (60+) ಕೊರೋನ ಪಾಸಿಟಿವ್‌ನೊಂದಿಗೆ ಮೃತಪಟ್ಟಿದ್ದಾರೆ.

ಕಿಡ್ನಿ ಸಮಸ್ಯೆ ಇದ್ದ ಇವರು ಇಲಿಜ್ವರದಿಂದ ಬಳಲುತಿದ್ದಾರೆ ಎಂದು ಮೊದಲು ತಿಳಿಯಲಾಗಿತ್ತು. ಆದರೆ ಕೊನೆಗೆ ಪರೀಕ್ಷೆ ವೇಳೆ ಅವರಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ.

ಉಬ್ಬಸದೊಂದಿಗೆ ಕೊರೋನ ಪಾಸಿಟಿವ್ ಇದ್ದು, ಕಳೆದ ಹಲವು ದಿನಗಳಿಂದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದ ಉಡುಪಿ ಅಂಬಲಪಾಡಿಯ ಹಿರಿಯ (60+) ಮಹಿಳೆಯೊಬ್ಬರು ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಅಲ್ಲದೇ ಕಾರ್ಕಳ ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು ಎಂದು ತಿಳಿದುಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಕೊರೋನಕ್ಕೆ ಮೃತಪಟ್ಟವರ ಸಂಖ್ಯೆ 24ಕ್ಕೇರಿದೆ ಎಂದು ಇಲಾಖೆ ತಿಳಿಸಿದೆ.

ಅಲ್ಲದೇ ಮಂಗಳವಾರ ಮಣಿಪಾಲ ಕೆಎಂಸಿಯಲ್ಲಿ ಕೊರೋನ ಪಾಸಿಟಿವ್ ಇದ್ದ ಶಿವಮೊಗ್ಗ ಹಾಗೂ ದಾವಣಗೆರೆಯ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದೂ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News