ಅಯೋಧ್ಯೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮೋದಿ ಉಪಸ್ಥಿತಿ ಸಾಂವಿಧಾನಿಕ ಪ್ರಮಾಣ ವಚನದ ಉಲ್ಲಂಘನೆ: ಉವೈಸಿ

Update: 2020-07-28 16:16 GMT

ಹೊಸದಿಲ್ಲಿ, ಜು.28: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯ ಸಂಭಾವ್ಯ ಉಪಸ್ಥಿತಿ ಅವರು ಅಧಿಕಾರ ವಹಿಸಿಕೊಂಡಾಗ ಕೈಗೊಂಡ ಸಾಂವಿಧಾನಿಕ ಪ್ರಮಾಣ ವಚನದ ಉಲ್ಲಂಘನೆಯಾಗಲಿದೆ ಎಂದು ಎಐಎಂಐಎಂನ ಮುಖ್ಯಸ್ಥ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

 ಜಾತ್ಯತೀತತೆಯು ಸಂವಿಧಾನದ ಮೂಲರಚನೆಯ ಭಾಗವಾಗಿದೆ. ಸರಕಾರದ ಭಾಗವಾಗಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಭಾರತದ ಪ್ರಧಾನಿಯಾಗಿ ಕೈಗೊಂಡಿದ್ದ ಸಾಂವಿಧಾನಿಕ ಪ್ರಮಾಣ ವಚನದ ಉಲ್ಲಂಘನೆಯಾಗಿದೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ 400 ವರ್ಷಕ್ಕೂ ಹೆಚ್ಚು ಸಮಯದಿಂದ ಇತ್ತು ಮತ್ತು 1992ರಲ್ಲಿ ಕ್ರಿಮಿನಲ್‌ಗಳ ಗುಂಪೊಂದು ಅದನ್ನು ನೆಲಸಮಗೊಳಿಸಿದೆ ಎಂಬುದನ್ನು ಮರೆಯಬಾರದು ಎಂದು ಮಂಗಳವಾರ ಉವೈಸಿ ಟ್ವೀಟ್ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುವ ಶಿಲಾನ್ಯಾಸ ಕಾರ್ಯಕ್ರಮದ ಸಂಭಾವ್ಯ ನೇರಪ್ರಸಾರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಎಡಪಕ್ಷಗಳ ಮುಖಂಡರು ಕೇಂದ್ರ ಸರಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಉವೈಸಿ ಈ ಹೇಳಿಕೆ ನೀಡಿದ್ದಾರೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಿರುವ ನಿರ್ಬಂಧದಿಂದಾಗಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಭಕ್ತರ ಅನುಕೂಲಕ್ಕಾಗಿ ಕಾರ್ಯಕ್ರಮದ ನೇರ ಪ್ರಸಾರ ನಡೆಸುವ ಯೋಜನೆಯಿದೆ ಎಂದು ವರದಿಯಾಗಿತ್ತು. ಆಗಸ್ಟ್ 5ರಂದು ಮಂದಿರ ನಿರ್ಮಾಣಕ್ಕೆ ನಿಯೋಜಿತ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ ಮಧ್ಯಾಹ್ನ 12:15ಕ್ಕೆ ಶಿಲಾನ್ಯಾಸ ನಡೆಸಲಿದ್ದಾರೆ ಎನ್ನಲಾಗಿದೆ. ಆದರೆ ಆಗಸ್ಟ್ 5ರ ಪ್ರಧಾನಿ ಮೋದಿ ಕಾರ್ಯಕ್ರಮದ ದೃಢೀಕೃತ ಅಧಿಕೃತ ವೇಳಾಪಟ್ಟಿ ಇನ್ನೂ ಬಿಡುಗಡೆಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News