ಗುಜರಾತ್: ವಡೋದರಾ ಕಾರಾಗೃಹದ 60 ಕೈದಿಗಳಿಗೆ ಕೊರೋನ ಸೋಂಕು

Update: 2020-07-28 15:17 GMT

ಅಹ್ಮದಾಬಾದ್, ಜು. 28: ಗುಜರಾತ್‌ನ ವಡೋದರ ಕೇಂದ್ರ ಕಾರಾಗೃಹದಲ್ಲಿ ಕಳೆದ ಎರಡು ದಿನಗಳಲ್ಲಿ ಕನಿಷ್ಠ 60 ಕೈದಿಗಳಿಗೆ ಕೊರೋನ ಸೋಂಕು ತಗುಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಕೊರೋನ ಸೋಂಕಿಗೆ ಒಳಗಾದ ಕೈದಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಜೈಲಿನ ಆವರಣದಲ್ಲಿ 80 ಹಾಸಿಗೆಗಳ ಕೋವಿಡ್-19 ಚಿಕಿತ್ಸಾ ಕೇಂದ್ರ ಆರಂಭಿಸುವ ಪ್ರಕ್ರಿಯೆಯಲ್ಲಿ ಜೈಲಿನ ಆಡಳಿತ ತೊಡಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ‘‘ನಾವು ಇದುವರೆಗೆ 150 ಕೈದಿಗಳ ಪರೀಕ್ಷೆ ನಡೆಸಿದ್ದೇವೆ. ರವಿವಾರ ಅವರಲ್ಲಿ 17 ಮಂದಿಗೆ ಕೊರೋನ ಸೋಂಕು ತಗಲಿರುವುದು ಪತ್ತೆಯಾಯಿತು. ರೋಗ ಲಕ್ಷಣಗಳಿಲ್ಲದ ಉಳಿದ 43 ಮಂದಿಗೆ ನಡೆಸಿದ ಪರೀಕ್ಷೆಯಲಿ ಕೊರೋನ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ.’’ ಎಂದು ವಡೋದರಾದಲ್ಲಿ ಕೋವಿಡ್-19 ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ, ವಿಶೇಷ ಅಧಿಕಾರಿ ವಿನೋದ್ ರಾವ್ ತಿಳಿಸಿದ್ದಾರೆ.

ಕಾರಾಗೃಹದಲ್ಲಿ ಪ್ರಸ್ತುತ 6 ವೈದ್ಯರ ತಂಡ ಪೂರ್ಣಾವಧಿ ಚಿಕಿತ್ಸೆ ನೀಡುತ್ತಿದೆ. ವಡೋದರದಲ್ಲಿ ಸೋಮವಾರ ದೃಢಪಟ್ಟ 82 ಕೊರೋನ ಸೋಂಕು ಪ್ರಕರಣಗಳಲ್ಲಿ 43 ಪ್ರಕರಣಗಳು ಕೇಂದ್ರ ಕಾರಗೃಹವೊಂದರಿಂದಲೇ ವರದಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ರಾವ್ ಅವರು ಸೋಮವಾರ ವಡೋದರಾ ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ, ಕನಿಷ್ಠ 1,000 ಕೈದಿಗಳಿರುವ ಈ ಕಾರಾಗೃಹದಲ್ಲಿ ಕೊರೋನ ಸೋಂಕು ಹರಡುತ್ತಿರುವ ಕಾರಣದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವಡೋದರ ನಗರಾಡಳಿತದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ‘‘ಕೊರೋನ ರೋಗ ಲಕ್ಷಣ ಇಲ್ಲದ ಕೊರೋನ ಸೋಂಕಿತ ಕೈದಿಗಳಿಗೆ ಚಿಕಿತ್ಸೆ ನೀಡಲು ಕಾರಾಗೃಹದ ಆವರಣದಲ್ಲಿ 80 ಹಾಸಿಗೆಗಳ ಕೋವಿಡ್-19 ಚಿಕಿತ್ಸಾ ಕೇಂದ್ರ ಆರಂಭಿಸಲಾಗುವುದು. ಈ ಕೇಂದ್ರ ಈ ವಾರಾಂತ್ಯದಲ್ಲಿ ಆರಂಭವಾಗಲಿದೆ. ಸರಕಾರಿ ಎಸ್‌ಎಸ್‌ಜಿ ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿ ಈ ಚಿಕಿತ್ಸಾ ಕೇಂದ್ರ ಕಾರ್ಯ ನಿರ್ವಹಿಸಲಿದೆ’’ ಎಂದು ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News