ದಲಿತ ಮಹಿಳೆಯ ಮೃತದೇಹವನ್ನು ಚಿತಾಗಾರದಿಂದ ಹೊರಗೆಳೆದ ಮೇಲ್ಜಾತಿಯ ಜನರು: ಆರೋಪ

Update: 2020-07-28 15:47 GMT
ಸಾಂದರ್ಭಿಕ ಚಿತ್ರ

 ಲಕ್ನೋ, ಜು. 28: ಮೇಲ್ಜಾತಿಯವರಿಗೆ ಸೇರಿದ ಸ್ಮಶಾನದಲ್ಲಿ ದಲಿತ ಮಹಿಳೆಯೋರ್ವರ ಅಂತ್ಯಸಂಸ್ಕಾರ ನಡೆಸಲು ಪ್ರಯತ್ನಿಸುತ್ತಿದ್ದಾಗ ಮೇಲ್ಜಾತಿಗೆ ಸೇರಿದ ಜನರು ಶವವನ್ನು ಚಿತಾಗಾರದಿಂದ ಹೊರಗೆಳೆದು ಹಾಕಿದ ಘಟನೆ ಆಗ್ರಾದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವೀಡಿಯೊ ವೈರಲ್ ಆದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಬಿಎಸ್ಪಿ ವರಿಷ್ಠೆ ಮಾಯಾವತಿ ಉತ್ತರಪ್ರದೇಶದ ಆದಿತ್ಯನಾಥ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

 ‘‘ಆಗ್ರಾದಲ್ಲಿ ಸ್ಮಶಾನ ಮೇಲ್ಜಾತಿಗೆ ಸೇರಿದೆ ಎನ್ನುವ ಕಾರಣಕ್ಕೆ ಜಾತಿವಾದಿ ಮನಸ್ಥಿತಿಯ ಮೇಲ್ಜಾತಿ ಜನರು ಚಿತಾಗಾರದಿಂದ ದಲಿತ ಮಹಿಳೆಯ ಶವವನ್ನು ಎಳೆದು ಹಾಕಿದ್ದಾರೆ. ಇದು ಅವಮಾನಕರ ಹಾಗೂ ಖಂಡನೀಯ’’ ಎಂದು ಅವರು ಹೇಳಿದ್ದಾರೆ. ಮಾಯಾವತಿ ಇನ್ನೊಂದು ಟ್ವೀಟ್‌ನಲ್ಲಿ, ಈ ಜಾತಿವಾದಿ ಹಾಗೂ ಅಸಹ್ಯ ಘಟನೆಯ ಬಗ್ಗೆ ತನಿಖೆ ನಡೆಸಲು ಉತ್ತರಪ್ರದೇಶ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಇನ್ನು ಮುಂದೆ ಪುನರಾವರ್ತನೆಯಾಗಬಾರದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News