ಭಾರತಕ್ಕೆ ರಫೇಲ್ ವಿಮಾನ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಐಎಎಫ್ ಕಮಾಂಡರ್ ಹಿಲಾಲ್ ಅಹ್ಮದ್ ರಾಥರ್

Update: 2020-07-28 15:57 GMT
ಫೋಟೊ ಕೃಪೆ: twitter.com

ಹೊಸದಿಲ್ಲಿ, ಜು. 28: ರಫೇಲ್ ಯುದ್ಧ ವಿಮಾನವನ್ನು ಹಾರಿಸಿದ ಮೊದಲ ಪೈಲಟ್ ಆಗಿರುವುದಲ್ಲದೆ, ಭಾರತದ ಅಗತ್ಯಕ್ಕೆ ತಕ್ಕಂತೆ ರಫೇಲ್ ಯುದ್ಧ ವಿಮಾನಕ್ಕೆ ಶಸ್ತ್ರಾಸ್ತ್ರ ಅಳವಡಿಕೆ ಕಾರ್ಯದಲ್ಲಿ ಜೊತೆಯಾಗಿದ್ದ ಹೆಗ್ಗಳಿಕೆಗೆ ಏರ್ ಕಮಾಂಡರ್ ಹಿಲಾಲ್ ಅಹ್ಮದ್ ರಾಥರ್ ಪಾತ್ರರಾಗಿದ್ದಾರೆ.

ರಫೇಲ್ ಯುದ್ಧ ವಿಮಾನವನ್ನು ಭಾರತಕ್ಕೆ ತ್ವರಿತವಾಗಿ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ವ್ಯಕ್ತಿ ಏರ್ ಕಮಾಂಡರ್ ಹಿಲಾಲ್ ಅಹ್ಮದ್ ರಾಥರ್ ಸದ್ಯ ಅವರು ಫ್ರಾನ್ಸ್‌ ನಲ್ಲಿರುವ ಭಾರತದ ರಾಜತಾಂತ್ರಿಕ ನಿಯೋಗದ ವಾಯುಪಡೆಯ ಮುಖ್ಯಸ್ಥರಾಗಿದ್ದಾರೆ. ಏರ್ ಕಮಾಂಡರ್ ರಾಥರ್ ಅವರು ಜಮ್ಮುಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಕ್ಷಿಯಾಬಾದ್ ಪ್ರದೇಶದವರು. ಅವರು ಸೈನಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದುಕೊಂಡರು. ಅನಂತರ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನಲ್ಲಿ ಪದವೀಧರರಾದರು. ಬಳಿಕ ಅಮೆರಿಕದ ಏರ್ ವಾರ್ ಕಾಲೇಜಿನಿಂದ ಉನ್ನತ ಶಿಕ್ಷಣವನ್ನು ಡಿಸ್ಟ್ರಿಂಕ್ಷನ್‌ನೊಂದಿಗೆ ಪಡೆದುಕೊಂಡರು.

1988 ಡಿಸೆಂಬರ್ 17ರಂದು ಅವರನ್ನು ಭಾರತೀಯ ವಾಯುಪಡೆಯ ಯುದ್ಧ ವಿಮಾನದ ಪೈಲೆಟ್ ಆಗಿ ನಿಯೋಜಿಸಲಾಯಿತು. ಅನಂತರ 1993ರಲ್ಲಿ ಅವರನ್ನು ಯುದ್ಧ ವಿಮಾನದ ಲೆಫ್ಟಿನೆಂಟ್, 2004ರಲ್ಲಿ ವಿಂಗ್ ಕಮಾಂಡರ್, 2016ರಲ್ಲಿ ಗ್ರೂಪ್ ಕ್ಯಾಪ್ಟನ್ ಹಾಗೂ 2019ರಲ್ಲಿ ಏರ್ ಕಮಾಂಡರ್ ಆಗಿ ನಿಯೋಜಿಸಲಾಯಿತು. 2010ರಲ್ಲಿ ವಿಂಗ್ ಕಮಾಂಡರ್ ಆಗಿದ್ದಾಗ ಅವರು ಕರ್ತವ್ಯ ನಿಷ್ಠೆಗೆ ಯುವ ಸೇನಾ ಪದಕ ಪಡೆದುಕೊಂಡಿದ್ದಾರೆ. 2016ರಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದಾಗ ವಿಶಿಷ್ಟ ಸೇವಾ ಪದಕ ಪಡೆದುಕೊಂಡಿದ್ದಾರೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ‘ಸ್ವೋರ್ಡ್ ಆಫ್ ಹಾನರ್’ಗೂ ಅವರು ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News