ಮೊದಲ ತ್ರೈಮಾಸಿಕದಲ್ಲಿ ಮಾರುತಿ ಸುಝುಕಿಗೆ 268 ಕೋಟಿ ರೂ. ನಷ್ಟ
Update: 2020-07-29 16:55 IST
ಹೊಸದಿಲ್ಲಿ: ಜೂನ್ ಅಂತ್ಯಕ್ಕೆ ಕೊನೆಗೊಂಡ ಪ್ರಸಕ್ತ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಒಟ್ಟು ರೂ 268.3 ಕೋಟಿ ನಷ್ಟವನ್ನು ಆಟೋಮೊಬೈಲ್ ಕ್ಷೇತ್ರದ ಪ್ರಮುಖ ಕಂಪೆನಿಯಾಗಿರುವ ಮಾರುತಿ ಸುಝುಕಿ ಇಂದು ವರದಿ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿ ರೂ 1,376.8 ಕೋಟಿ ಲಾಭ ಗಳಿಸಿತ್ತು.
ಕಳೆದ 15 ವರ್ಷಗಳ ಅವಧಿಯಲ್ಲಿ ತ್ರೈಮಾಸಿಕವೊಂದರಲ್ಲಿ ಕಂಪೆನಿ ಈ ವರ್ಷ ಮೊದಲ ಬಾರಿ ನಷ್ಟ ಅನುಭವಿಸಿದೆ. ಕೋವಿಡ್ ಸಮಸ್ಯೆ ಹಾಗೂ ಲಾಕ್ ಡೌನ್‍ನಿಂದಾಗಿ ಕಂಪೆನಿಯ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಆರ್ಥಿಕ ವರ್ಷ 2020ರ ಮೊದಲನೇ ತ್ರೈಮಾಸಿಕದಲ್ಲಿ ಕಂಪೆನಿ ರೂ 19,273.2 ಕೋಟಿ ಆದಾಯ ಗಳಿಸಿದ್ದರೆ ಈ ಬಾರಿ ಅದೇ ಅವಧಿಯಲ್ಲಿ ಅದು ಗಳಿಸಿದ ಆದಾಯ ಶೇ 78.67ರಷ್ಟು ಕುಸಿದು ರೂ 4,110.6 ಕೋಟಿಗೆ ಇಳಿದಿದೆ.
ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಂಸ್ಥೆ ಒಟ್ಟು 76,599 ವಾಹನಗಳ ಮಾರಾಟ ಮಾಡಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 4,02,600 ವಾಹನಗಳ ಮಾರಾಟ ದಾಖಲಾಗಿತ್ತು.