×
Ad

ತುಟ್ಟಿ ಭತ್ಯೆ ತಡೆ ಹಿಡಿದಿರುವ ಕ್ರಮ ವಿರೋಧಿಸಿ ಧರಣಿ: ಸರಕಾರದ ಆದೇಶ ಪ್ರತಿಗಳನ್ನು ದಹಿಸಿ ಕಾರ್ಮಿಕರ ಆಕ್ರೋಶ

Update: 2020-07-29 17:23 IST

ಕುಂದಾಪುರ, ಜು.29: ತುಟ್ಟಿ ಭತ್ಯೆ ತಡೆ ಹಿಡಿದ ರಾಜ್ಯ ಸರಕಾರದ ಕ್ರಮ ಮತ್ತು ಕಾರ್ಮಿಕ ಕಾನೂನು ತಿದ್ದಪಡಿಯನ್ನು ವಿರೋಧಿಸಿ ಸಿಐಟಿಯು ಉಡುಪಿ ತಾಲೂಕು ಸಮಿತಿ ನೇತೃತ್ವದಲ್ಲಿ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಧರಣಿಯಲ್ಲಿ ಕಾರ್ಮಿಕರು, ಸರಕಾರದ ಆದೇಶ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಮುಂಚೂಣಿಯ ಆರೋಗ್ಯ ಕಾರ್ಯಕರ್ತರನ್ನು ಖಾಯಂಗೊಳಿಸಿ ಪೂರ್ಣ ವೇತನ ನೀಡಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಕುಟುಂಬಗಳಿಗೆ ಆರು ತಿಂಗಳವರೆಗೆ ಮಾಸಿಕ 7500ರೂ. ನಗದು ವರ್ಗಾವಣೆ ಮಾಡಬೇಕು. ಯೋಜನಾ ಕಾರ್ಮಿಕರಿಗೆ ಕೊರೋನ ಕೆಲಸದ ಪ್ರೋತ್ಸಾಹಧನ ನೀಡಬೇಕು. ನರೇಗಾ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಬೇಕು ಮತ್ತು ನಗರ ಪ್ರದೇಶಕ್ಕೆ ವಿಸ್ತರಿಸಬೇಕೆಂದು ಧರಣಿನಿರತರು ಒತ್ತಾಯಿಸಿದರು. ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಯ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷರುಗಳಾದ ವಿಶ್ವನಾಥ್ ರೈ, ಬಾಲಕೃಷ್ಣ ಶೆಟ್ಟಿ, ಎಐಟಿಯುಸಿನ ಶೇಖರ್, ಕೆ.ವಿ. ಭಟ್, ಸಿಐಟಿಯು ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಪ್ರಧಾನ ಕಾರ್ಯ ದರ್ಶಿ ಕವಿರಾಜ್, ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ತಾಲೂಕು ಖಜಾಂಚಿ ಉಮೇಶ್ ಕುಂದರ್, ಮುಖಂಡರಾದ ಶಶಿಧರ್ ಗೊಲ್ಲ, ನಳಿನಿ, ಸುನೀತಾ ಶೆಟ್ಟಿ, ವಿದ್ಯಾರಾಜ್ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುದಲ್ಲೂ ಧರಣಿ: ಕಾರ್ಮಿಕರಿಗೆ ತುಟ್ಟಿ ಭತ್ಯೆಯನ್ನು ಕಾರ್ಖಾನೆಗಳ ಮಾಲಕರು ನೀಡಬೇಕಾಗಿಲ್ಲ ಎಂಬ ಸರಕಾರದ ಆದೇಶವನ್ನು ವಿರೋಧಿಸಿ, ಸಿಐಟಿಯು ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ಹಂಚು ಕಾರ್ಖಾನೆಗಳಲ್ಲಿ ಸಾವಿರಾರು ಕಾರ್ಮಿಕರು ಆದೇಶ ಪ್ರತಿಗಳನ್ನು ದಹಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ, ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ವೇತನವಾಗಲಿ, ಕೆಲಸವಾಗಲಿ, ಪರಿಹಾರವಾಗಲಿ ಕೊಡಿಸದ ಸರಕಾರ ರಾಜ್ಯದ 35 ಲಕ್ಷ ಕಾರ್ಮಿಕರಿಗೆ ಸಿಗಬೇಕಾಗಿದ್ದ 22270 ಕೋಟಿಯಷ್ಟು ಹಣವನ್ನು ಮಾಲಕರಿಗೆ ಉಳಿಸುವ ಮೂಲಕ ಬಿಜೆಪಿ ಪಕ್ಷ ಕಾರ್ಮಿಕ ವರ್ಗದ ವಿರೋಧಿಯಾಗಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಹೆಂಚು ಕಾರ್ಮಿಕರ ಸಂಘದ ಕೋಶಾಧಿಕಾರಿ ಪ್ರಕಾಶ್ ಕೋಣಿ, ಕಾರ್ಖಾನೆ ಮುಖಂಡ ಚಂದ್ರ ದೇಾಡಿಗ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News