ಸಿಇಟಿ ಪರೀಕ್ಷೆಗೆ ಉಡುಪಿ ಜಿಲ್ಲೆ ಸಜ್ಜು; 3915 ಅಭ್ಯರ್ಥಿಗಳು

Update: 2020-07-29 12:39 GMT

ಉಡುಪಿ, ಜು.29: ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಈ ಬಾರಿ ಜು.30 ಹಾಗೂ 31ರಂದು ರಾಜ್ಯಾದ್ಯಂತ ನಡೆಯಲಿದ್ದು, ಇದಕ್ಕಾಗಿ ಉಡುಪಿ ಜಿಲ್ಲೆಯ ಹತ್ತು ಪರೀಕ್ಷಾ ಕೇಂದ್ರಗಳು ಕೋವಿಡ್-19ಗೆ ಕೈಗೊಳ್ಳ ಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಸಜ್ಜಾಗಿ ನಿಂತಿವೆ ಎಂದು ಉಡುಪಿ ಜಿಲ್ಲಾ ಡಿಡಿಪಿಯು ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.

ಈ ಬಾರಿ ಉಡುಪಿ ಜಿಲ್ಲೆಯಲ್ಲಿ 1853 ಬಾಲಕರು ಹಾಗೂ 2061 ಬಾಲಕಿಯರು ಸೇರಿದಂತೆ ಒಟ್ಟು 3915 ಅಭ್ಯರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಕಲ್ಪಿಸುವ ಸಿಇಟಿ ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 10 ಪರೀಕ್ಷಾ ಕೇಂದ್ರಗಳಿದ್ದು ಉಡುಪಿಯಲ್ಲಿ ಐದು, ಕುಂದಾಪುರದಲ್ಲಿ ಮೂರು ಹಾಗೂ ಕಾರ್ಕಳದಲ್ಲಿ ಎರಡು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಉಡುಪಿಯಲ್ಲಿ ಎಂಜಿಎಂ, ಪಿಪಿಸಿ, ವಿದ್ಯೋದಯ, ಸರಕಾರಿ ಪದವಿ ಪೂರ್ವ ಕಾಲೇಜು, ಮಣಿಪಾಲದ ಮಣಿಪಾಲ ಜೂನಿಯರ್ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿವೆ.

ಕುಂದಾಪುರದಲ್ಲಿ ಎನ್.ಆರ್.ಶೆಟ್ಟಿ, ಸರಕಾರಿ ಹಾಗೂ ಭಂಡಾರ್‌ಕಾರ್ಸ್‌ ಪದವಿ ಪೂರ್ವ ಕಾಲೇಜುಗಳಲ್ಲಿ, ಕಾರ್ಕಳದ ಭುವನೇಂದ್ರ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದವರು ನುಡಿದರು.

ಪ್ರತಿ ದಿನ ತಲಾ ಎರಡು ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10:30ರಿಂ 11:50ರವರೆಗೆ ಹಾಗೂ ಅಪರಾಹ್ನ 2:30ರಿಂದ 3:50ರವರೆಗೆ ಪರೀಕ್ಷೆಗಳು ನಡೆಯಲಿವೆ. ಜು.30ರಂದು ಜೀವ ಶಾಸ್ತ್ರ ಹಾಗೂ ಗಣಿತ ಪರೀಕ್ಷೆ ನಡೆದರೆ, ಜು.31ರಂದು ರಸಾಯನ ಶಾಸ್ತ್ರ ಮತ್ತು ಭೌತಶಾಸ್ತ್ರ ಪರೀಕ್ಷೆಗಳು ನಡೆಯಲಿವೆ ಎಂದೂ ಕಟ್ಟಿಮನಿ ತಿಳಿಸಿದರು.

ಕೋವಿಡ್ ಸುರಕ್ಷತಾ ಕ್ರಮ:ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸೋಂಕು ಲಕ್ಷಣಗಳನ್ನು ಪರೀಕ್ಷಿಸಿ, ಪರೀಕ್ಷಾ ಕೇಂದ್ರದ ಒಳಗೆ ಬಿಡಬೇಕಾಗಿರುವುದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ಬೆಳಗ್ಗೆ 9:00ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಉಪಸ್ಥಿತ ರಿರಬೇಕು ಎಂದು ಡಿಡಿಪಿಯು ತಿಳಿಸಿದರು.

ಪ್ರತಿ ಕೇಂದ್ರದಲ್ಲಿ ಒಂದು ವಿಶೇಷ ಕೊಠಡಿಯನ್ನು ತೆರೆಯಲಾಗಿದ್ದು, ಸಾಮಾನ್ಯ ಶೀತ, ಕೆಮ್ಮು, ಜ್ವರ, ನೆಗಡಿ ಇಂತಹ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು.

ಪರೀಕ್ಷಾ ಕೇಂದ್ರಗಳಿಗೆ ಸೋಂಕು ನಿವಾರಣಾ ದ್ರಾವಣ ಸಿಂಪಡಿಸಿ ಪರೀಕ್ಷಾ ಕೊಠಡಿ ಹಾಗೂ ಡೆಸ್ಕುಗಳನ್ನು ಸ್ವಚ್ಚಗೊಳಿಸಿ ಶುದ್ಧೀಕರಿಸಲಾಗಿದೆ. ಪರೀಕ್ಷೆ ಬರೆಯಲು ವಿದ್ಯಾರ್ಥಿ ಕೇಂದ್ರದೊಳಗೆ ಬರುವ ಮುನ್ನ ವೈದ್ಯಕೀಯ ಸಿಬ್ಬಂದಿಗಳಿಂದ ಥರ್ಮಲ್ ಸ್ಕಾನರ್ ಮೂಲಕ ಪರೀಕ್ಷಿಸಿ, ನೀರು ಮತ್ತು ಸಾಬೂನುಗಳಿಂದ ಕೈತೊಳೆದು ಮಾಸ್ಕ್ ಧರಿಸಿಕೊಂಡು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಬೇಕಾಗುತ್ತದೆ ಎಂದು ಭಗವಂತ ಕಟ್ಟಿಮನಿ ತಿಳಿಸಿದರು.

3 ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳು
ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್-19ಗೆ ಪಾಸಿಟಿವ್ ಬಂದಿರುವ ಮೂವರು ವಿದ್ಯಾರ್ಥಿಗಳು ಈ ಬಾರಿಯ ಸಿಇಟಿ ಪರೀಕ್ಷೆಯನ್ನು ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕುಂದಾಪುರದ ಇಬ್ಬರು ಹಾಗೂ ಉಡುಪಿಯ ಒಬ್ಬ ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳು ತಾಲೂಕು ಕೇಂದ್ರಗಳ ಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಉಡುಪಿಯಲ್ಲಿ ಬನ್ನಂಜೆಯಲ್ಲಿರುವ ಸಮಾಜ ಕಲ್ಯಾಣ ವಸತಿ ನಿಲಯ, ಕುಂದಾಪುರದಲ್ಲಿ ದೇವರಾಜ ಅರಸು ವಸತಿ ನಿಲಯ ಹಾಗೂ ಕಾರ್ಕಳದಲ್ಲಿ ಭುವನೇಂದ್ರ ವಸತಿ ನಿಲಯಗಳಲ್ಲಿ ಇವರಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ಹೆಚ್ಚುವರಿ ಪರೀಕ್ಷಾ ಕೇಂದ್ರವನ್ನು ಕಾಯ್ದಿರಿಸಲಾಗಿದೆ ಎಂದು ಕಟ್ಟಿಮನಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News