ಕೆಎಂಸಿಯಿಂದ ಹೋಮ್ ಐಸೋಲೇಷನ್ ಕಿಟ್ ಬಿಡುಗಡೆ

Update: 2020-07-29 12:42 GMT

ಮಣಿಪಾಲ, ಜು.29: ಕಳೆದ ಹಲವು ದಶಕಗಳಲ್ಲೇ ವಿಶ್ವದಾದ್ಯಂತ ಮಾನವನ ಮೇಲೆ ಭೀಕರವಾದ ಪರಿಣಾಮ ಬೀರಿರುವ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟು ಪ್ರಯತ್ನವಾಗಿ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಹೋಮ್ ಐಸೋಲೇಷನ್‌ನಲ್ಲಿರುವ ಕೊರೋನ ಪಾಸಿಟಿವ್ ರೋಗಿಗಳ ಬಳಕೆಗೆ ಸಂಬಂಧಿಸಿದಂತೆ ಕಿ್ ಒಂದು ತಯಾರಿಸಿ ಬಿಡುಗಡೆಗೊಳಿಸಿದೆ.

ಕೋವಿಡ್-19ರ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಸುರಕ್ಷತೆಗಾಗಿ ಆಗಾಗ ಬಿಡುಗಡೆ ಮಾಡುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ಕಿಟ್‌ನ್ನು ತಯಾರಿಸಲಾಗಿದೆ. ಮನೆಯಲ್ಲಿ ಐಸೋಲೇಷನ್ ಆಗುವ ರೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ಹಾಗೂ ಮನೆಯಲ್ಲಿ ಕ್ವಾರಂಟೈನ್ ಆಗುವವರಿಗಾಗಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಣಾಧಿಕಾರಿ ಜಿ.ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮೊದಲ ಕಿಟ್‌ನ್ನು ಹಸ್ತಾಂತರಿಸುವ ಮೂಲಕ ಇದನ್ನು ಬಿಡುಗಡೆಗೊಳಿಸಿದರು. ಮಾರುಕಟ್ಟೆ ವಿಭಾಗ ಮುಖ್ಯಸ್ಥ ಸಚಿನ್ ಕಾರಂತ ಮತ್ತು ಕಾರ್ಯಾಚರಣೆ ಮುಖ್ಯಸ್ಥ ಜಿಬು ಥಾಮಸ್ ಉಪಸ್ಥಿತರಿದ್ದರು.

ಇದರಲ್ಲಿ ಎರಡು ಬಗೆಯ ಪ್ಯಾಕೇಜ್ ಮತ್ತು ಕಿಟ್ ಸೌಲಭ್ಯವಿದ್ದು, ಹತ್ತು ದಿನಗಳ ಸಾಮಾನ್ಯ ಪ್ಯಾಕೇಜ್‌ಗೆ 4,000 ರೂ. ಇದರಲ್ಲಿ ಒಂದು ಥರ್ಮೋ ಮೀಟರ್, ಒಂದು ಪಲ್ಸ್ ಆಕ್ಸಿಮೀಟರ್, ಹತ್ತು ಮುಖಗವಸುಗಳು, ಒಂದು ಪಿಪಿಇ ಕಿಟ್, ಒಂದು ಸ್ಯಾನಿಟೈಜರ್(500ಎಂಎಲ್), ಒಂದು ವೈಟಲ್ ಚಾರ್ಟ್‌ಗಳಿದ್ದು, ವೈದ್ಯರೊಂದಿಗೆ 3 ಬಾರಿ ಉಚಿತ ವಿಡಿಯೋ ಸಮಲೋಚನೆ (1ನೇ ದಿನ, 5ನೇ ದಿನ, 9ನೇ ದಿನ), ಒಂದು ಸಲ ಪಥ್ಯಾಹಾರ ತಜ್ಞರೊಂದಿಗೆ ಉಚಿತ ಸಮಾಲೋಚನೆ ಮತ್ತು ದಿನಕ್ಕೆ ಒಂದು ಸಲ ದಾದಿಯರೊಂದಿಗೆ ಉಚಿತ ವಿಡಿಯೋ ಸಮಾಲೋಚನೆ ಒಳಗೊಂಡಿದೆ. ಹತ್ತು ದಿನಗಳ ಸಮಗ್ರ ಪ್ಯಾಕೆಜ್‌ಗೆ 6,000ರೂ. ಶುಲ್ಕವಿದ್ದು, ಹೆಚ್ಚುವರಿಯಾಗಿ ಒಂದು ಬಿ.ಪಿ.ಅಪರೇಟೀಸ್ ದೊರೆಯಲಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0820- 2922761ನ್ನು ಸಂಪರ್ಕಿಸಬಹುದು ಎಂದು ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News