ಜು.31: ಕರಾವಳಿಯಾದ್ಯಂತ ‘ಬಕ್ರೀದ್’ ಆಚರಣೆ
ಮಂಗಳೂರು,ಜು.29: ಪ್ರವಾದಿ ಇಬ್ರಾಹೀಂ (ಅ) ಮತ್ತು ಅವರ ಪುತ್ರ ಇಸ್ಮಾಯೀಲ್ (ಅ) ಅವರ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜು.31ರ ಶುಕ್ರವಾರ ಕರಾವಳಿಯಾದ್ಯಂತ ಆಚರಿಸಲಾಗುತ್ತದೆ.
ಕೋವಿಡ್ -19 ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ಮಾರ್ಗಸೂಚಿ ಹೊರಡಿಸಿರುವ ಸರಕಾರವು ಈದ್ಗಾದಲ್ಲಿ ಸಾಮೂಹಿಕ ನಮಾಝ್ ಮತ್ತು ಈದ್ ಖುತ್ಬಾಕ್ಕೆ ನಿರ್ಬಂಧ ವಿಧಿಸಿದೆ. ಮಸೀದಿಗಳಲ್ಲಿ ಸಾಮೂಹಿಕ ನಮಾಝ್‌ಗೆ ಅವಕಾಶ ನೀಡಿದ್ದರೂ ಕೂಡ ಕನಿಷ್ಟ 50ಕ್ಕಿಂತ ಅಧಿಕ ಮಂದಿ ಸೇರದಂತೆ ಎಚ್ಚರಿಕೆ ವಹಿಸಲು ಮಸೀದಿಗಳ ಆಡಳಿತ ಮಂಡಳಿಗಳಿಗೆ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಎಬಿ ಇಬ್ರಾಹೀಂ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ 50ಕ್ಕಿಂತ ಅಧಿಕ ಮಂದಿ ಆಗಮಿಸಿದರೆ ಸರದಿ ಬ್ಯಾಚ್‌ಗಳಲ್ಲಿ ನಮಾಝ್ ನಿರ್ವಹಿಸಲು ಸೂಚಿಸಿದ್ದಾರೆ. ಅಲ್ಲದೆ 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳು ಮಸೀದಿಗೆ ಪ್ರವೇಶಿಸದಂತೆ ತಿಳಿಸಲಾಗಿದೆ.
ಮಸೀದಿಗಳನ್ನು ಹೊರತುಪಡಿಸಿ ಇತರ ಯಾವುದೇ ಸ್ಥಳಗಳಲ್ಲಿ ಅಂದರೆ ಸಭಾಂಗಣ, ಸಮುದಾಯ ಭವನ, ಶಾದಿಮಹಲ್ ಮತ್ತಿತರ ತೆರೆದ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವಂತಿಲ್ಲ ಎಂದು ಸೂಚಿಸಲಾಗಿದೆ.
ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕನ್ನು ಕಡ್ಡಾಯವಾಗಿ ಹಾಕತಕ್ಕದ್ದು, ನಮಾಝ್ ನಿರ್ವಹಿಸುವವರ ಮಧ್ಯೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು, ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪವಾನವನ್ನು ತಪಾಸಣೆ ಮಾಡಬೇಕು, ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಬೇಕು. ಮಸೀದಿಗಳಲ್ಲಿರುವ ಧಾರ್ಮಿಕ ಗ್ರಂಥಗಳನ್ನು ಮುಟ್ಟುವಂತಿಲ್ಲ. ಮನೆಗಳಿಂದಲೆ ಮುಸಲ್ಲಾವನ್ನು (ಜಾನಿಮಾಝ್) ಕಡ್ಡಾಯವಾಗಿ ತರಬೇಕು. ಹಸ್ತಲಾಘವ ಅಥವಾ ಆಲಿಂಗನ ಮಾಡಬಾರದು ಎಂದು ಸೂಚಿಸಲಾಗಿದೆ.
ಅದರಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ದ.ಕ. ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಮಸೀದಿಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ ಮತ್ತು ಈದ್ ಸಂದೇಶ ನಡೆಯಲಿದೆ.
ನಮಾಝ್ ಟೈಮಿಂಗ್ಸ್
ತಲಪಾಡಿಯ ಬಿಲಾಲ್ ಜುಮಾ ಮಸ್ಜಿದ್-ಬೆಳಗ್ಗೆ 7 ಗಂಟೆಗೆ.
ಹಿದಾಯತ್ ನಗರದ ಅಲ್ ಹಿದಾಯ ಜುಮಾ ಮಸ್ಜಿದ್- 7 ಗಂಟೆಗೆ.
ಅಜ್ಜಿನಡ್ಕದ ಬದ್ರಿಯಾ ಜುಮಾ ಮಸ್ಜಿದ್- 7 ಗಂಟೆಗೆ.
ಕೆಸಿ ರೋಡ್‌ನ ಅಲ್ ಮುಬಾರಕ್ ಜುಮಾ ಮಸ್ಜಿದ್-7 ಗಂಟೆಗೆ.
ಎಸ್. ಉಚ್ಚಿಲ-407 ಜುಮಾ ಮಸ್ಜಿದ್ - 7 ಗಂಟೆಗೆ.
ಕೆ.ಸಿ.ನಗರ ಅಲ್ ಹುದಾ ಜುಮಾ ಮಸ್ಜಿದ್ - 7 ಗಂಟೆಗೆ.
ಉಡುಪಿ ಕಾಪು ಮಸ್ಜಿದ್ ಮಿಸ್ಬಾಹ್ ಬಿನ್ ಉಮರ್ -7
ಕುಂದಾಪುರ ಮಸ್ಜಿದ್ ತಕ್ವಾ- 7:30
ಹಂಡೇಲು ಮಸ್ಜಿದ್ ಅಬು ಹುರೈರ- 7:30
ಮುಲ್ಕಿ ಕಾರ್ನಾಡು ಮಸ್ಜಿದ್ ತೌಹೀದ್-7:45