ಜಿಲ್ಲಾಧಿಕಾರಿಯ ವರ್ಗಾವಣೆ ಕೈ ಬಿಡಲು ಎಸ್‌ಡಿಪಿಐ ಆಗ್ರಹ

Update: 2020-07-29 13:01 GMT

ಮಂಗಳೂರು, ಜು.29: ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ನಡೆಸುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದ್ದ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ವರ್ಗಾವಣೆಯ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

ಕಠಿಣ ಕ್ರಮ ಜರುಗಿಸುವುದಾಗಿ ಹೇಳಿಕೆ ನೀಡಿದ್ದಕ್ಕಾಗಿ ಸಂಘಪರಿವಾರದ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ಜಿಲ್ಲಾಧಿಕಾರಿಯವರನ್ನೇ ಕೊಲೆ ಮಾಡುವಂತಹ ಘೋರ ಸಂದೇಶ ರವಾನಿಸಿರುವುದು ಮತ್ತು ಜಿಲ್ಲಾಧಿಕಾರಿಯವರು ಹೇಳಿಕೆ ನೀಡಿದ ಬೆನ್ನಲ್ಲೇ ಅವರನ್ನು ದಿಢೀರ್ ಆಗಿ ಸರಕಾರ ವರ್ಗಾವಣೆ ಮಾಡಿರುವುದು ಆಘಾತಕಾರಿ ನಡೆಯಾಗಿದೆ. ಅಲ್ಲದೆ ಸರ್ವಾಧಿಕಾರದ ಪರಮಾವಧಿಯಾಗಿದೆ ಎಂದು ಎಸ್‌ಡಿಪಿಐ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲಾದ್ಯಂತ ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ, ದಾಳಿ ನಡೆಸಿದಂತಹ ಸಂದರ್ಭ ದಾಳಿಕೋರರ ಮೇಲೆ ಲಘು ಸೆಕ್ಷನ್ ಹಾಕಿದ್ದೇ ಹೀಗೆ ಬೆದರಿಕೆ ಹಾಕಲು ಕಾರಣವಾಗಿದೆ.ಕೆಲವೊಂದು ಕಡೆಗಳಲ್ಲಿ ಪ್ರಕರಣವನ್ನು ದಾಖಲಿಸದೆ ಗೂಂಡಾಗಳನ್ನು ಬೆಳೆಯಲು ಪೊಲೀಸ್ ಇಲಾಖೆಯೂ ಬಿಟ್ಟಿದೆ. ಹಾಗಾಗಿ ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಪುನಃ ರೂಪಿಸಬೇಕು ಹಾಗೂ ಸಂಘ ಪರಿವಾರದ ಗೂಂಡಾಗಳೊಂದಿಗೆ ಕಾನೂನು ಬಾಹಿರ ಕೃತ್ಯಕ್ಕೆ ಬೆಂಬಲ ನೀಡುವ ಪೊಲೀಸ್ ಅಧಿಕಾರಿಗಳನ್ನು ಹೊರ ಜಿಲ್ಲೆಗಳಿಗೆ ವರ್ಗಾವಣೆಗೊಳಿಸಬೇಕು. ಹಾಗೂ ದ.ಕ ಜಿಲ್ಲೆಗೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲೆಯ ಶಾಂತಿ ಸಾಮರಸ್ಯವನ್ನು ಕಾಪಾಡಬೇಕು ಎಂದು ಒತ್ತಾಯಿಸಿದೆ.

ಜಿಲ್ಲಾಧಿಕಾರಿಯ ಹೇಳಿಕೆಯ ಬೆನ್ನಲ್ಲೇ ಅವರನ್ನು ದಿಢೀರನೆ ವರ್ಗಾವಣೆ ಮಾಡಿರುವುದು ಹಲವು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದೆ. ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಅಧಿಕಾರಿಗಳಿಗಳನ್ನು ಬಿಜೆಪಿ ಸರಕಾರ ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. ದ.ಕ. ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಹಿತ ಹಲವು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಬಿಜೆಪಿ ಸರಕಾರದ ಕಾರ್ಯವೈಖರಿಯ ವಿರುದ್ಧ ಸಿಡಿದೆದ್ದು ರಾಜಿನಾಮೆ ಸಲ್ಲಿಸಿರುವುದು ಕೂಡ ಬಿಜೆಪಿ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News