×
Ad

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಗೆ ಶೇ.50 ಬೆಡ್ ಮೀಸಲು ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ ಜ.ಜಗದೀಶ್

Update: 2020-07-29 19:19 IST

ಉಡುಪಿ, ಜು.29: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿತರ ಚಿಕಿತ್ಸೆಗಾಗಿ ಈಗಾಗಲೇ ಆಯುಷ್ಮಾನ್ ಭಾರತ್ ಯೋಜನೆಯಡಿ ನೊಂದಾಯಿಸಿಕೊಂಡಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಯಲ್ಲಿ ಶೇ.50ರಷ್ಟು ಬೆಡ್‌ಗಳನ್ನು ಕೋವಿಡ್ ಬಾಧಿತರ ಚಿಕಿತ್ಸೆಗೆ ಕಡ್ಡಾಯವಾಗಿ ಮೀಸಲಿಡುವಂತೆ ಸೂಚಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಬೆಡ್‌ಗಳನ್ನು ಮೀಸಲಿಡದ ಆಸ್ಪತ್ರೆಗಳ ನೊಂದಣಿಯನ್ನು ಕೆಪಿಎಂಇ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಪ್ರಸ್ತುತ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೊಂದಾಯಿಸಿ ಕೊಂಡಿರುವ 20 ಆಸ್ಪತ್ರೆಗಳು ಮಾತ್ರವಲ್ಲದೇ ಇತರೆ ಖಾಸಗಿ ಆಸ್ಪತ್ರೆಗಳೂ ಸಹ ಎಬಿಆರ್‌ಕೆ ಯೋಜನೆಯಡಿ ನೊಂದಾಯಿಸಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಈಗಾಗಲೇ ನೊಂದಾಯಿಸಿರುವ ಆಸ್ಪತ್ರೆಗಳಲ್ಲಿ ನಾಳೆಯಿಂದಲೇ ಬೆಡ್‌ಗಳ ವ್ಯವಸ್ಥೆ ಸಿದ್ದಪಡಿಸಿಟ್ಟುಕೊಂಡು ಜಿಲ್ಲಾಡಳಿತ ಕಳುಹಿಸುವ ಕೋವಿಡ್ -19 ರೋಗಿಗಳನ್ನು ತಕ್ಷಣದಲ್ಲೇ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದರು.

ಯಾವುದೇ ಸಂದರ್ಭದಲ್ಲೂ, ಯಾವುದೇ ಕಾರಣಕ್ಕೂ ರೋಗಿಗೆ ಬೆಡ್ ಇಲ್ಲ ಎಂದು ನಿರಾಕರಿಸುವಂತಿಲ್ಲ. ನಿರಾಕರಿಸಿದ್ದಲ್ಲಿ ನೊಂದಣಿ ರದ್ದುಪಡಿಸುವುದರೊಂದಿಗೆ ಎಪಿಡೆಮಿಕ್ ಕಾಯ್ದೆಯಡಿ ಸಹ ಪ್ರಕರಣ ದಾಖಲಿಸಲಾಗುವುದು ಎಂದರು.

ಕೋವಿಡ್ ಚಿಕಿತ್ಸೆಗೆ ನೊಂದಾಯಿಸಿರುವ ಆಸ್ಪತ್ರೆಗಳು ಕೋವಿಡ್-19 ಚಿಕಿತ್ಸೆ ಮಾತ್ರವಲ್ಲದೇ, ಮಹಿಳೆ ಮತ್ತು ಮಕ್ಕಳ ಚಿಕಿತ್ಸೆಗೆ ಸಹ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್-19ರಿಂದ ಹೆಚ್ಚಿನ ಮರಣ ಸಂಭವಿಸುವುದನ್ನು ತಡೆಯಲು ಜಿಲ್ಲಾಡಳಿತ ಅವಿರತ ಪ್ರಯತ್ನ ಮಾಡುತ್ತಿದ್ದು, ಜಿಲ್ಲೆಯ ಮರಣ ಪ್ರಮಾಣ ರಾಜ್ಯದಲ್ಲೇ ಅತ್ಯಂತ ಕನಿಷ್ಠವಾಗಿದೆ. ಹೋಮ್ ಕ್ವಾರಂಟೈನ್ ಉಲ್ಲಂಘನೆ ತಡೆಯುವಲ್ಲಿ ಸಹ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಕ್ವಾರಂಟೈನ್ ಉಲ್ಲಂಸಿದ 69 ಜನರ ವಿರುದ್ದ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಲ್ಲದೇ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಯಲ್ಲಿರುವವರಲ್ಲಿ ಹೆಚ್ಚು ಸೋಂಕು ಕಂಡುಬರುತ್ತಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಕಿವಿಮಾತು ಹೇಳಿದರು. ಎಲ್ಲಾ ಆಸ್ಪತೆಗಳು ತಮ್ಮಲ್ಲಿರುವ ಬೆಡ್ ಗಳು ಮತ್ತು ಲಭ್ಯ ಸೌಲಭ್ಯಗಳ ಕುರಿತು ಬೆಡ್ ಮೇನೆಜ್‌ಮಂಟ್‌ನಲ್ಲಿ ದಾಖಲಿಸುವಂತೆ ಈಗಾಗಲೇ ಸೂಚಿಸಿದ್ದು, ದಾಖಲಿಸದವರ ವಿರುದ್ದ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ರೋಗ ಲಕ್ಷಣಗಳಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಕಳೆದ ವಾರದಿಂದ ಪ್ರತಿದಿನ ಸರಾಸರಿ 700 ಜನರ ಪರೀಕ್ಷೆ ನಡೆಸಲಾಗುತ್ತಿದೆ. ಪಾಸಿಟಿವ್ ಪ್ರಮಾಣ ಅಧಿಕವಾಗುತ್ತಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕ, ಐಎಲ್‌ಐ ಮತ್ತು ಸಾರಿ ಯಲ್ಲಿ ಹೆಚ್ಚು ಪಾಸಿಟಿವ್ ಕಂಡು ಬರುತ್ತಿವೆ ಎಂದು ಜಿಲ್ಲಾ ಕೋವಿಡ್-19 ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದರು.

ಜಿಪಂ ಸಿಇಓ ಪ್ರೀತಿ ಗೆಹ್ಲೋತ್ ಮಾತನಾಡಿ, ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ, ಬಳಸಲಾಗಿರುವ ಸಂಖ್ಯೆ, ಖಾಲಿ ಇರುವ ಸಂಖ್ಯೆ, ಮೀಸಲಿಟ್ಟಿರುವ ಸಂಖ್ಯೆ ಹಾಗೂ ವೆಂಟಿಲೇಟರ್, ಐಸಿಯುಗಳ ಸಂಖ್ಯೆಯನ್ನು ನೀಡುವಂತೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ವಿವಿದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News