ಉಡುಪಿ: ವಿದೇಶ, ಹೊರರಾಜ್ಯಗಳಿಂದ ಬಂದ ವ್ಯಕ್ತಿಗಳಿಗೆ 14 ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯ
ಉಡುಪಿ, ಜು.29: ಉಡುಪಿ ಜಿಲ್ಲೆಗೆ ವಿದೇಶ, ಹೊರರಾಜ್ಯಗಳಿಂದ ಬಂದಿರುವ ವ್ಯಕ್ತಿಗಳು ಹಾಗೂ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇವರು 14 ದಿನ ಹೋಮ್ ಕ್ವಾರಂಟೈನ್‌ನಲ್ಲಿ ಇರುವುದು ಕಡ್ಡಾಯವಾಗಿದೆ.
ಆದರೆ ಇಂಥ ವ್ಯಕ್ತಿಗಳು ನಿಯಮ ಬಾಹಿರವಾಗಿ ಹೊರಗಡೆ ತಿರುಗುತ್ತಿ ರುವುದು ಕಂಡುಬಂದಿರುತ್ತದೆ. ಇದರಿಂದಾಗಿ ಕೋವಿಡ್ ರೋಗ ನಿಯಂತ್ರಣದಲ್ಲಿ ಹಿನ್ನಡೆಯಾಗುತ್ತಿದೆ. ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ದ ನಿಗಾ ಇಡಲು ಕ್ವಾರಂಟೈನ್ ವಾಚ್‌ಆ್ಯಪ್ ತಂತ್ರಜ್ಞಾನ ಬಳಕೆಯಾಗುತ್ತಿದ್ದು, ಇದರಿಂದಾಗಿ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡುತ್ತಿರುವವ್ಯಕ್ತಿಗಳ ಮಾಹಿತಿ ಲಭ್ಯವಾಗುತ್ತಿದೆ. ಅಂತಹವರ ವಿರುದ್ದ ಈಗಾಗಲೇ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಎಚ್ಚರಿಕೆಗಳನ್ನು ಕೊಟ್ಟು ಹೊರಗಡೆ ತಿರುಗಾಟ ನಡೆಸದಂತೆ ಮನವರಿಕೆ ಮಾಡಿದರೂ ಕೂಡಾ ನಿಯಮಗಳನ್ನು ಪಾಲಿಸದೇ ಮತ್ತೆ ಉಲ್ಲಂಘನೆ ಮಾಡಿರುವ ಒಟ್ಟು 69 ವ್ಯಕ್ತಿಗಳ ವಿರುದ್ಧ ಎಫ್‌ಐಆಪ್ ದಾಖಲಿಸಲಾಗಿದೆ.
ಹೋಮ್ ಕ್ವಾರಂಟೈನ್ ಹಾಗೂ ಹೋಮ್ ಐಸೋಲೇಷನ್‌ನಲ್ಲಿರುವ ಯಾರೂ ಕೂಡ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಹೊರಗಡೆ ತಿರುಗಾಟ ನಡೆಸಬಾರದಾಗಿ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಉಲ್ಲಂಘನೆ ಮಾಡಿದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.