ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬಂದಿರುವುದು 2012 ರ ನಮ್ಮ ಒಪ್ಪಂದದ ಫಲ: ಕಾಂಗ್ರೆಸ್

Update: 2020-07-29 14:36 GMT

ಅಹ್ಮದಾಬಾದ್, ಜು. 29: ನಾಲ್ಕು ವರ್ಷಗಳ ಬಳಿಕ 5 ರಫೇಲ್ ಯುದ್ಧ ವಿಮಾನಗಳ ತಂಡ ಭಾರತಕ್ಕೆ ಆಗಮಿಸಿದ ಬಳಿಕ, ಫ್ರಾನ್ಸ್‌ನಿಂದ ರಫೇಲ್ ಜೆಟ್ ಅನ್ನು ಆಮದು ಮಾಡಿಕೊಳ್ಳಲು ಮೊಟ್ಟ ಮೊದಲು ತಾನು ನಡೆಸಿದ ಒಪ್ಪಂದವನ್ನು ಕಾಂಗ್ರೆಸ್ ನೆನಪಿಸಿದೆ.

ರಫೇಲ್ ಯುದ್ಧ ವಿಮಾನ ಬುಧವಾರ ಅಂಬಾಲದಲ್ಲಿ ಇಳಿಯುತ್ತಿದ್ದಂತೆ ಕಾಂಗ್ರೆಸ್, ‘‘ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯು ಪಡೆ ಖರೀದಿಸಿರುವುದಕ್ಕೆ ಅಭಿನಂದನೆಗಳು. 2012ರಲ್ಲಿ ರಫೇಲ್ ಯುದ್ಧ ವಿಮಾನವನ್ನು ಗುರುತಿಸುವಲ್ಲಿ ಹಾಗೂ ಖರೀದಿಸುವಲ್ಲಿ ಕಾಂಗ್ರೆಸ್ ವಹಿಸಿದ ಶ್ರಮಕ್ಕೆ ಕೊನೆಗೂ ಪ್ರತಿಫಲ ದೊರಕಿದೆ’’ ಎಂದು ಬುಧವಾರ ಟ್ವೀಟ್ ಮಾಡಿದೆ.

ಮನಮೋಹನ್ ಸಿಂಗ್ ಅಂತಿಮಗೊಳಿಸಿದ ರಫೇಲ್ ಒಪ್ಪಂದ ಹಾಗೂ ಮೋದಿ ಸಹಿ ಹಾಕಿದ ಅಂತಿಮ ಒಪ್ಪಂದದ ವ್ಯತ್ಯಾಸಗಳ ಬಗ್ಗೆ ಕಾಂಗ್ರೆಸ್ ಗಮನ ಸೆಳೆದಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಒಪ್ಪಂದದ ನಡುವಿನ ಸಂಪೂರ್ಣ ವ್ಯತ್ಯಾಸವು ಬಿಜೆಪಿಯ ಹಗರಣವನ್ನು ಬಹಿರಂಗಪಡಿಸುತ್ತದೆ: 36 ರಫೇಲ್ ಯುದ್ಧ ವಿಮಾನ ಖರೀದಿಗೆ ಬದಲು ಕಾಂಗ್ರೆಸ್ 109 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುತ್ತಿತ್ತು. 108 ವಿಮಾನಗಳನ್ನು ಭಾರತದಲ್ಲೇ ತಯಾರಿಸುತ್ತಿತ್ತು. 2016ರ ಹೊತ್ತಿಗೆ ಭಾರತ ವಿಮಾನಗಳನ್ನು ಸ್ವೀಕರಿಸಿರುತ್ತಿತ್ತು. ವಿಮಾನದ ಬೆಲೆ 256 ಕೋಟಿ ರೂಪಾಯಿ ಆಗಿರುತ್ತಿತ್ತು ಎಂದು ಕಾಂಗ್ರೆಸ್ ಹೇಳಿದೆ.

 ಯುಪಿಎ ಸರಕಾರದ ಒಪ್ಪಂದಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಸಂಖ್ಯೆಯ ರಫೇಲ್ ಯುದ್ಧ ವಿಮಾನಗಳನ್ನು ತರುವ ಜವಾಬ್ದಾರಿಯನ್ನು ಮೋದಿ ಸರಕಾರ ವಹಿಸಿದ್ದಾಗ, ಮೋದಿ ಸರಕಾರವನ್ನು ಹೊಣೆಗಾರನನ್ನಾಗಿ ಮಾಡಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ರಫೇಲ್ ಯುದ್ಧ ವಿಮಾನದ ಒಪ್ಪಂದವನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡಿದ್ದರು.

 ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ಮೋದಿ ಸರಕಾರವನ್ನು ಇದೇ ರೀತಿಯಲ್ಲಿ ಟೀಕಿಸಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 126 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ, ಮೋದಿ ಸರಕಾರ ಕೇವಲ 36 ವಿಮಾನಗಳ ಖರೀದಿ ಒಪ್ಪಂದಕ್ಕೆ ಮಾತ್ರ ಸಹಿ ಹಾಕಿದೆ. ಪ್ರತಿಯೊಂದು ರಫೇಲ್ ಯುದ್ಧ ವಿಮಾನದ ಬೆಲೆ 746 ಕೋಟಿ ರೂಪಾಯಿ. ಇದು ಕಾಂಗ್ರೆಸ್ ಒಪ್ಪಂದ ಮಾಡಿಕೊಂಡ ಬೆಲೆಗಿಂತ ತುಂಬಾ ಹೆಚ್ಚು ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News