×
Ad

ದ.ಕ. ಜಿಲ್ಲೆಯಲ್ಲಿ ಹತೋಟಿ ಬಾರದ ಕೋವಿಡ್: ಮತ್ತೆ ಏಳು ಸಾವು; ಹೊಸದಾಗಿ 208 ಮಂದಿಗೆ ಸೋಂಕು

Update: 2020-07-29 20:18 IST

ಮಂಗಳೂರು, ಜು.29: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಲೇ ಇದ್ದು, ಬುಧವಾರ 208 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಮತ್ತೆ ಏಳು ಮಂದಿ ಸೋಂಕಿತರು ಸಾವಿಗೀಡಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 142ಕ್ಕೆ ಏರಿದೆ.

ಕೊರೋನ ಸೋಂಕಿನೊಂದಿಗೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಪಡುಬಿದ್ರಿಯ 52 ವರ್ಷದ ವ್ಯಕ್ತಿ, ಬಂಟ್ವಾಳದ 62 ವರ್ಷದ ವ್ಯಕ್ತಿ, ಮಂಗಳೂರಿನ 69 ವರ್ಷದ ವೃದ್ಧೆ ಹಾಗೂ 73 ವರ್ಷದ ವೃದ್ಧ, ಧಾರವಾಡದ 66 ವರ್ಷದ ವೃದ್ಧ, ಕಾರವಾರದ 66 ವರ್ಷದ ವೃದ್ಧ ಹಾಗೂ ಮಂಗಳೂರಿನ 39 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಮೂಲ ಗೊತ್ತಿಲ್ಲದ 58 ಕೇಸ್: ಹೊಸದಾಗಿ ಪತ್ತೆಯಾದ 208 ಪಾಸಿಟಿವ್ ಪ್ರಕರಣಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 65 ಮಂದಿಗೆ ಕೊರೋನ ತಗುಲಿದ್ದರೆ, ತೀವ್ರ ಉಸಿರಾಟ ಸಮಸ್ಯೆ ಮತ್ತು ಶೀತ ಲಕ್ಷಣದ 85 ಪ್ರಕರಣಗಳಿವೆ. ಬರೋಬ್ಬರಿ 58 ಪ್ರಕರಣಗಳಲ್ಲಿ ಸೋಂಕು ಎಲ್ಲಿಂದ ಹರಡಿದೆ ಎನ್ನುವ ಮಾಹಿತಿಯೇ ಇಲ್ಲ. ಈ ಎಲ್ಲರನ್ನು ವಿವಿಧ ಖಾಸಗಿ, ಕೋವಿಡ್ ಆಸ್ಪತ್ರೆಯಲ್ಲಿ, ಗೃಹ ನಿಗಾವಣೆ, ಕೊರೋನ ಕೇರ್ ಸೆಂಟರ್‌ಗಳಿಗೆ ದಾಖಲಿಸಲಾಗಿದೆ.

118 ಡಿಸ್ಚಾರ್ಜ್: ಆಶಾದಾಯಕ ಬೆಳವಣಿಗೆಯಲ್ಲಿ ಕೊರೋನಾ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ 118 ಮಂದಿ ಬುಧವಾರ ಗುಣಮುಖರಾಗಿದ್ದಾರೆ. ಅವರಲ್ಲಿ ಅನೇಕ ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5311 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 2456 ಮಂದಿ ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 2715 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯಲ್ಲಿರುವವರಲ್ಲಿ ಬಹುತೇಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಹೆಚ್ಚಿನವರಿಗೆ ಸೋಂಕಿನ ಲಕ್ಷಣ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಿವಿಧ ಆಸ್ಪತ್ರೆಗಳಲ್ಲಿ ಇತರ ಗಂಭೀರ ಕಾಯಿಲೆಗಳಿಂದ 10ಕ್ಕೂ ಅಧಿಕ ಮಂದಿ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News