ವೈದ್ಯರಿಗೆ ಸಿಕ್ಕ ಜನಮನ್ನಣೆ ನನಗೆ ಯಾಕೆ ಸಿಕ್ಕಿಲ್ಲ: ಟ್ರಂಪ್ ಪ್ರಶ್ನೆ

Update: 2020-07-29 15:04 GMT

ವಾಶಿಂಗ್ಟನ್, ಜು. 29: ಅಮೆರಿಕದ ವೈದ್ಯಕೀಯ ಪರಿಣತ ಡಾ. ಆ್ಯಂಟನಿ ಫೌಚಿಗೆ ಲಭಿಸಿರುವ ಅಧಿಕ ಜನಮನ್ನಣೆಯನ್ನು ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘’ನನ್ನನ್ನು ಯಾರೂ ಇಷ್ಟಪಡುತ್ತಿಲ್ಲ’’ ಎಂದು ಬೇಸರಪಟ್ಟುಕೊಂಡಿದ್ದಾರೆ. ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುತ್ತಿರುವ ರೀತಿಗಾಗಿ ಟ್ರಂಪ್ ಜನಮನ್ನಣೆಯಲ್ಲಿ ಹಿನ್ನಡೆ ಅನುಭವಿಸಿದ್ದು, ಅದನ್ನು ಸುಧಾರಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.

ನವೆಂಬರ್‌ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ರಿಪಬ್ಲಿಕನ್ ಪಕ್ಷದಿಂದ ಮರು ಆಯ್ಕೆ ಬಯಸಿರುವ ಹಿನ್ನೆಲೆಯಲ್ಲಿ, ತನ್ನ ಜನಮನ್ನಣೆ (ಅಪ್ರೂವಲ್ ರೇಟಿಂಗ್ಸ್)ಯನ್ನು ಸುಧಾರಿಸಿಕೊಳ್ಳುವುದು ಅವರಿಗೆ ಅಗತ್ಯವಾಗಿದೆ.

‘‘ನನ್ನ ವ್ಯಕ್ತಿತ್ವವೇ ಹಾಗಿರಬಹುದು’’ ಎಂದು ಅವರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗಗಳ ಪರಿಣತರಾಗಿರುವ ಡಾ. ಫೌಚಿ, ಟ್ರಂಪ್‌ರ ಕೊರೋನ ವೈರಸ್ ಕಾರ್ಯಪಡೆಯಲ್ಲಿದ್ದಾರೆ. ಅವರು ಸರಕಾರದಲ್ಲಿರುವ ಅತ್ಯಂತ ನಂಬಿಕಸ್ತ ವ್ಯಕ್ತಿಗಳ ಪೈಕಿ ಓರ್ವರಾಗಿದ್ದು, ಸೋಂಕಿನಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ಅವರು ನೀಡುವ ಸಲಹೆಗಳನ್ನು ಜನರು ಶ್ರದ್ಧೆಯಿಂದ ಆಲಿಸುತ್ತಾರೆ.

ಇನ್ನೊಂದೆಡೆ, ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುತ್ತಿರುವ ರೀತಿಗಾಗಿ ಟ್ರಂಪ್ ಭಾರೀ ಟೀಕೆಗಳನ್ನು ಎದುರಿಸುತ್ತಿದ್ದಾರೆ ಹಾಗೂ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುವ ಭೀತಿಯನ್ನು ಎದುರಿಸುತ್ತಿದ್ದಾರೆ.

‘‘ಅವರು (ಫೌಚಿ) ನಮ್ಮ ಸರಕಾರದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಫೌಚಿ ಮತ್ತು ಇತರ ವೈದ್ಯರು ಮಾಡಿರುವ ಹೆಚ್ಚಿನ ಶಿಫಾರಸುಗಳನ್ನು ನಾವು ಜಾರಿಗೆ ತಂದಿದ್ದೇವೆ. ಅವರಿಗೆ ಹೆಚ್ಚಿನ ಜನಮನ್ನಣೆ ಲಭಿಸಿದೆ. ನನಗೆ ಮತ್ತು ನನ್ನ ಸರಕಾರಕ್ಕೆ ಯಾಕೆ ಹೆಚ್ಚಿನ ಜನಮನ್ನಣೆ ಸಿಗುವುದಿಲ್ಲ? ನಮಗೂ ಅಧಿಕ ಜನಮನ್ನಣೆ ಸಿಗಬೇಕಾಗಿತ್ತು’’ ಎಂದು ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News