ಶಾಲಾ ಪಠ್ಯಗಳಿಗೆ ಪ್ರಜಾಪ್ರಭುತ್ವವಾದಿ ಟಿಪ್ಪುಸುಲ್ತಾನರ ಅಗತ್ಯವಿದೆ

Update: 2020-07-29 19:30 GMT

ರಾಜಪ್ರಭುತ್ವಕ್ಕೆ ಸಹಜವಾದ ಯುದ್ಧ, ಆಕ್ರಮಣ, ರಕ್ತಪಾತ, ಗಡಿವಿಸ್ತರಣೆಗಳ ನೆಲೆಯಲ್ಲಿ ತನ್ನ ರಾಜ್ಯಕ್ಕೆ ಸೀಮಿತವಾಗಿ ಟಿಪ್ಪು ಶೌರ್ಯ ಸಾಹಸ ಮೆರೆದಿದ್ದರೆ ಆತನನ್ನು ಚರ್ಚಿಸುವ ಅಗತ್ಯವಿರಲಿಲ್ಲ. ಬದಲಾಗಿ ಬ್ರಿಟಿಷ್ ವಸಾಹತು ಇಡೀ ಭಾರತಖಂಡವನ್ನು ಆಕ್ರಮಿಸುತ್ತದೆ ಎನ್ನುವ ಎಚ್ಚರದಿಂದ ಬ್ರಿಟಿಷರ ವಿರುದ್ಧ ಫ್ರೆಂಚರನ್ನು ಒಳಗೊಂಡಂತೆ ವಿದೇಶಿ ಮತ್ತು ದೇಶೀಯ ಅರಸರುಗಳನ್ನು ಒಗ್ಗೂಡಿಸಿ ಪರ್ಯಾಯ ಶಕ್ತಿ ಕಟ್ಟಲು ಪ್ರಯತ್ನಿಸಿದ ಕಾರಣ ಇಂದು ಟಿಪ್ಪು ಮುಖ್ಯವಾಗುತ್ತಾನೆೆ. ಎರಡನೆಯದಾಗಿ ರಾಜಪ್ರಭುತ್ವದ ದೊರೆ ಪ್ರಜಾಪ್ರಭುತ್ವದ ಆಶಯಗಳನ್ನು ತನ್ನ ರಾಜ್ಯದಲ್ಲಿ ಸಾದ್ಯಾಂತ ಜಾರಿಗೆ ತರುವಲ್ಲಿ ಹಂಬಲಿಸಿದ. ಅದಕ್ಕಾಗಿ ಹತ್ತಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದ. ಈ ಕಾರಣಕ್ಕೆ ಟಿಪ್ಪು ಕರ್ನಾಟಕವನ್ನಾಳಿದ ಇತರೆಲ್ಲಾ ರಾಜರಿಗಿಂತ ವಿಶಿಷ್ಟವಾಗಿ ನಿಲ್ಲುತ್ತಾನೆ.


ಮೈಸೂರು ಹುಲಿ ಟಿಪ್ಪುಸುಲ್ತಾನನ ಕುರಿತ ಪಾಠವನ್ನು ರಾಜ್ಯಸರಕಾರ ಪಠ್ಯದಿಂದ ಕೈಬಿಟ್ಟಿದೆ. ಈ ಮೂಲಕ ಮಕ್ಕಳಿಗೆ ಮತ್ತು ಹೊಸತಲೆಮಾರಿಗೆ ಆತನೊಬ್ಬ ಮತಾಂಧ ಎನ್ನುವ ಸಂದೇಶವೊಂದು ರವಾನೆಯಾದಂತಾಗುತ್ತದೆ. ಈ ಹೊತ್ತಲ್ಲಿ ‘ಧರ್ಮ’ವನ್ನು ಹೊರತುಪಡಿಸಿ ಟಿಪ್ಪುವಿನ ನಿಜದ ಕನಸು ಮತ್ತು ಕಾಣ್ಕೆಗಳ ಬಗ್ಗೆ ಯುವ ಸಮುದಾಯದ ಗಮನಸೆಳೆಯುವ ಅಗತ್ಯವಿದೆ. ಟಿಪ್ಪುಸುಲ್ತಾನನ ಎರಡು ಕಲಾಕೃತಿಗಳು ಆತನನ್ನು ವಿವರಿಸಿಕೊಳ್ಳುವ ಎರಡು ಶಕ್ತ ರೂಪಕಗಳು. ಮೊದಲನೆಯದು ಭಾರತದ ಸಂವಿಧಾನದ ಮೂಲ ಪ್ರತಿಯ 144ನೇ ಪುಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರ ಉಲ್ಲೇಖವಿದೆ. ಶಾಂತಿನಿಕೇತನದ ಕಲಾವಿದ ನಂದಲಾಲ್ ಬೋಸ್ ಚಿತ್ರಿಸಿದ ಟಿಪ್ಪುಸುಲ್ತಾನ್ ಮತ್ತು ಝಾನ್ಸಿರಾಣಿ ಲಕ್ಷ್ಮೀಭಾಯಿ ಅವರ ರೇಖಾಚಿತ್ರಗಳಿವೆ. ಇದು ಕಾಕತಾಳೀಯ ಎನ್ನುವಂತೆ ಸ್ವತಃ ಟಿಪ್ಪು ತನ್ನದೆ ಸಂವಿಧಾನಬದ್ಧ ಪ್ರಜಾಪ್ರಭುತ್ವವಾದಿ ಆಡಳಿತ ನಡೆಸಿದ್ದಕ್ಕೂ ರೂಪಕವೆಂಬಂತಿದೆ. ಅಂತೆಯೇ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಆತ್ಮಕತೆ ‘ವಿಂಗ್ಸ್ ಆಫ್ ಫೈರ್’ನ ಪುಟ 37ರಲ್ಲಿ ವರ್ಜೀನಿಯಾದ ಪೂರ್ವ ಕರಾವಳಿಯ ದ್ವೀಪವಾದ ವಾಲ್ಲೊಪ್ ಎನ್ನುವ ನಾಸಾದ ಪ್ರಯೋಗ ಕೇಂದ್ರದ ಸ್ವಾಗತ ಕೌಂಟರ್ ಎದುರಿಗಿರುವ ಟಿಪ್ಪುಸುಲ್ತಾನ್ ರಾಕೆಟ್ ಬಳಸಿ ಯುದ್ಧಮಾಡುತ್ತಿರುವ ಕಲಾಕೃತಿಯ ಬಗೆಗೆ ಉಲ್ಲೇಖಿಸುತ್ತಾರೆ. ಇದನ್ನು ಕಂಡು ‘‘ಟಿಪ್ಪುಹುಟ್ಟಿದ ದೇಶದಲ್ಲೇ ಆತನನ್ನು ಮರೆತಿದ್ದೇವೆ, ಆದರೆ ದೂರದ ಖಂಡಾಂತರದ ದ್ವೀಪವೊಂದರಲ್ಲಿ ಟಿಪ್ಪುವನ್ನು ನೆನಪಿಸಿಕೊಂಡಿದ್ದಾರೆ’’ ಎನ್ನುತ್ತ ಕಲಾಂ ಮರುಗುತ್ತಲೆ ಹೆಮ್ಮೆ ಪಡುತ್ತಾರೆ. ಇದು ಟಿಪ್ಪುಅತ್ಯಾಧುನಿಕವಾಗಿದ್ದ ಎನ್ನುವುದಕ್ಕೆ ರೂಪಕವಾಗಿದೆ. ಹಾಗಾಗಿ ಇಂದು ಟಿಪ್ಪುವನ್ನು ಆಧುನಿಕ ಮನಸ್ಥಿತಿಯ ಪ್ರಜಾಪ್ರಭುತ್ವವಾದಿ ಎನ್ನುವ ನೆಲೆಯಲ್ಲಿ ಆತನನ್ನು ಚರ್ಚಿಸಬೇಕಿದೆ.

ರಾಜಪ್ರಭುತ್ವಕ್ಕೆ ಸಹಜವಾದ ಯುದ್ಧ, ಆಕ್ರಮಣ, ರಕ್ತಪಾತ, ಗಡಿವಿಸ್ತರಣೆಗಳ ನೆಲೆಯಲ್ಲಿ ತನ್ನ ರಾಜ್ಯಕ್ಕೆ ಸೀಮಿತವಾಗಿ ಟಿಪ್ಪುಶೌರ್ಯ ಸಾಹಸ ಮೆರೆದಿದ್ದರೆ ಆತನನ್ನು ಚರ್ಚಿಸುವ ಅಗತ್ಯವಿರಲಿಲ್ಲ. ಬದಲಾಗಿ ಬ್ರಿಟಿಷ್ ವಸಾಹತು ಇಡೀ ಭರತಖಂಡವನ್ನು ಆಕ್ರಮಿಸುತ್ತದೆ ಎನ್ನುವ ಎಚ್ಚರದಿಂದ ಬ್ರಿಟಿಷರ ವಿರುದ್ಧ ಫ್ರೆಂಚರನ್ನು ಒಳಗೊಂಡಂತೆ ವಿದೇಶಿ ಮತ್ತು ದೇಶೀಯ ಅರಸರುಗಳನ್ನು ಒಗ್ಗೂಡಿಸಿ ಪರ್ಯಾಯ ಶಕ್ತಿ ಕಟ್ಟಲು ಪ್ರಯತ್ನಿಸಿದ ಕಾರಣ ಇಂದು ಟಿಪ್ಪು ಮುಖ್ಯವಾಗುತ್ತಾನೆೆ. ಎರಡನೆಯದಾಗಿ ರಾಜಪ್ರಭುತ್ವದ ದೊರೆ ಪ್ರಜಾಪ್ರಭುತ್ವದ ಆಶಯಗಳನ್ನು ತನ್ನ ರಾಜ್ಯದಲ್ಲಿ ಸಾದ್ಯಾಂತ ಜಾರಿಗೆ ತರುವಲ್ಲಿ ಹಂಬಲಿಸಿದ. ಅದಕ್ಕಾಗಿ ಹತ್ತಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದ. ಈ ಕಾರಣಕ್ಕೆ ಟಿಪ್ಪು ಕರ್ನಾಟಕವನ್ನಾಳಿದ ಇತರೆಲ್ಲಾ ರಾಜರಿಗಿಂತ ವಿಶಿಷ್ಟವಾಗಿ ನಿಲ್ಲುತ್ತಾನೆ. ಟಿಪ್ಪುವಿನ ಆಡಳಿತದ ಕಾಲ ಜಾಗತಿಕವಾಗಿಯೂ ಊಳಿಗಮಾನ್ಯ ಅರ್ಥವ್ಯವಸ್ಥೆಯಿಂದ ಆಧುನಿಕ ಅರ್ಥವ್ಯವಸ್ಥೆಗೆ ಪರಿವರ್ತನೆಯಾಗುತ್ತಿತ್ತು. ಆ್ಯಡಂ ಸ್ಮಿತ್‌ನ ‘ವೆಲ್ತ್ ಆಫ್ ನೇಷನ್ಸ್’ ಕೃತಿ ಆಗ ತಾನೇ ಪ್ರಕಟವಾಗಿತ್ತು, ಕೈಗಾರಿಕಾ ಕ್ರಾಂತಿಯೂ ಆಗಿನ್ನೂ ಹುರಿಗಟ್ಟುತ್ತಿತ್ತು. ಇದೆಲ್ಲದರ ಪರಿಣಾಮ ಇತ್ತ ಭಾರತೀಯ ಸಮಾಜವೂ ಗ್ರಾಮೀಣ ಲಕ್ಷಣಗಳಿಂದ ನಗರದ ಚಹರೆಗಳಿಗೆ ಸೂಕ್ಷ್ಮವಾಗಿ ಹೊರಳಿಕೊಳ್ಳುತ್ತಿತ್ತು. ಇಂತಹ ಸಂದರ್ಭದಲ್ಲಿ ಕರ್ನಾಟಕದ ಭೂಭಾಗವು ಗ್ರಾಮೀಣದಿಂದ ನಗರಗಳ ಆಧುನಿಕತೆಗೆ ಹೊರಳಿಕೊಳ್ಳುವುದರ ಸ್ಪಷ್ಟ ಲಕ್ಷಣಗಳು ಗೋಚರವಾದದ್ದು ಟಿಪ್ಪುಕಾಲದಲ್ಲಿ. ಕೃಷಿಯ ನಂತರದ ಕೈಗಾರಿಕೆಯ ಬೆಳವಣಿಗೆಗೆ ಟಿಪ್ಪುಕೊಟ್ಟ ಪ್ರೋತ್ಸಾಹ ಇದಕ್ಕೆ ಕಾರಣವಾಯಿತು. ಆಹಾರದ ಅಭ್ಯಾಸಗಳು, ಜೀವನ ವಿಧಾನ, ಆಲೋಚನ ಕ್ರಮ, ಭಾಷೆ ಸಂಸ್ಕೃತಿ, ವೇತನ ಎಲ್ಲದರಲ್ಲೂ ಮಧ್ಯಯುಗದಿಂದ ಆಧುನಿಕಯುಗಕ್ಕೆ ಪರಿವರ್ತನೆ ಮಾಡಲು ಟಿಪ್ಪುತನ್ನ ಕಾಲವನ್ನೇ ಪ್ರಯೋಗಶಾಲೆಯನ್ನಾಗಿ ರೂಪಿಸಿಕೊಂಡ.

ಹೀಗಿರುವಾಗ ಫ್ರೆಂಚ್ ಮಹಾಕ್ರಾಂತಿಗೂ ಮುನ್ನ ಫ್ರಾನ್ಸ್‌ನಲ್ಲಿದ್ದ ಜನತೆಯ ಸ್ಥಿತಿಯೇ ಹೈದರ್ ಮತ್ತು ಟಿಪ್ಪುಕಾಲದ ರೈತಾಪಿವರ್ಗದ ಸ್ಥಿತಿಯಾಗಿತ್ತು. ಹಾಗಾಗಿಯೇ ಫ್ರೆಂಚ್ ಮಹಾಕ್ರಾಂತಿಯ ಆದರ್ಶಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಿಂದ ಪ್ರೇರಿತನಾಗಿದ್ದ ಟಿಪ್ಪುಸುಲ್ತಾನ್ ಶ್ರೀರಂಗಪಟ್ಟಣದಲ್ಲಿ ಜಕೋಬಿನ್ ಕ್ಲಬ್ ಒಂದನ್ನು ಪ್ರಾರಂಭಿಸಿದ್ದನು. ತನ್ನ ಅರಮನೆಯ ಮುಂಭಾಗದಲ್ಲಿ ‘ರಿಪಬ್ಲಿಕ್ ಸಸಿ’ಯನ್ನು ನೆಟ್ಟು ತಾನೊಬ್ಬ ‘ಸಿಟಿಜನ್ ಟಿಪ್ಪು’ ಎಂದು ಕರೆದುಕೊಂಡನು. ಇದರಿಂದ ಟಿಪ್ಪುತನ್ನ ಕಾಲದಲ್ಲಿ ಜನಕಂಟಕರಾಗಿದ್ದ 150ಕ್ಕೂ ಹೆಚ್ಚಿನ ಊಳಿಗಮಾನ್ಯ ಪಾಳೆಯಗಾರರನ್ನು ಮಟ್ಟಹಾಕಿ ಮೂಲಭೂತ ಬದಲಾವಣೆಗೆ ಶ್ರಮಿಸಿದನು. ಪರಿಣಾಮ ಭಾರತದ ಸ್ವಾತಂತ್ರಕ್ಕೆ ಧಕ್ಕೆಯಾಗದಂತೆ ಇಂಗ್ಲಿಷರನ್ನು ಹೊಡೆದೋಡಿಸಲು ಫ್ರೆಂಚರ ನೆರವನ್ನೂ ಬಯಸಿದ್ದನು. ವಸಾಹತುಶಾಹಿಗೆ ಅಧೀನವಾಗದ ಆಧುನಿಕ ರಾಜ್ಯವನ್ನು ಕಟ್ಟಲು ಟಿಪ್ಪು ಪ್ರಯತ್ನಿಸಿದ. ಹಾಗಾಗಿಯೇ ಅಂತರ್‌ರಾಷ್ಟ್ರೀಯ ವ್ಯಾಪಾರಕ್ಕೆ ಬದಲೀ ಮಾರ್ಗಗಳನ್ನು ಶೋಧಿಸಿದ. ಟಿಪ್ಪುವಿನ ಆಡಳಿತದ ಧ್ಯೇಯಗಳೆಂದರೆ ವಸಾಹತುಶಾಹಿಯ ವಿಸ್ತರಣೆಯನ್ನು ತಡೆಯುವುದು ಮತ್ತು ತನ್ನ ರಾಜ್ಯವನ್ನು ಆಧುನಿಕಗೊಳಿಸುವುದು. ರಾಜ್ಯನೀತಿಯ ಮೂರನೇ ಅಂಶ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಹಸಿವೆಯಿಂದ, ಮೂಢನಂಬಿಕೆಯಿಂದ, ಅಜ್ಞಾನ, ಬಡತನದಿಂದ ಸ್ವತಂತ್ರ ಪಡೆಯಬೇಕೆಂದು ಟಿಪ್ಪುಕನಸಿದ್ದ. ದಿಲ್ಲಿಯ ಜೆಎನ್‌ಯುನ ಕನ್ಹಯ್ಯುಕುಮಾರ್ ಜನಪ್ರಿಯಗೊಳಿಸಿದ ‘ಆಝಾದಿ’ ಘೋಷಣೆಯನ್ನು ಟಿಪ್ಪುಆ ಕಾಲಕ್ಕೇ ಸ್ವತಃ ದೊರೆಯಾಗಿ ಆಶಿಸಿದ್ದ. ರಾಜ್ಯನೀತಿಯ ನಾಲ್ಕನೇ ಅಂಶವೇ ಜಾತ್ಯತೀತತೆ. ಈ ನೆಲೆ ಶೃಂಗೇರಿ ಮಠಕ್ಕೆ ಬರೆದ ಟಿಪ್ಪುವಿನ ಪತ್ರಗಳಲ್ಲಿಯೂ, ಆಡಳಿತದಲ್ಲಿ ಮುಸ್ಲೀಮೇತರರ ಸಂಖ್ಯೆಯನ್ನು ನೋಡಿದರೆ ಅರಿವಾಗುತ್ತದೆ. 156 ಹಿಂದೂ ದೇವಸ್ಥಾನಗಳಿಗೆ ಟಿಪ್ಪುದಾನ ದತ್ತಿಗಳನ್ನು ಕೊಡುತ್ತಿದ್ದನು. ಹೀಗಾಗಿಯೇ ಗಾಂಧಿ ‘ಯಂಗ್ ಇಂಡಿಯಾ’ ದಲ್ಲಿ ‘‘ಟಿಪ್ಪು ಹಿಂದೂ ಮುಸ್ಲಿಮ್ ಐಕ್ಯತೆ ಮೂರ್ತರೂಪ’’ ಎನ್ನುತ್ತಾರೆ. ಇನ್ನು ಆರ್ಥಿಕ ಸಿದ್ಧಾಂತವೆಂದರೆ ಸರ್ವರಿಗೆ ಸಮಪಾಲು ಎನ್ನುವಂತೆ ಮೈಮುರಿದು ದುಡಿಯುವವರ ಏಳಿಗೆ ಮುಖ್ಯವಾಗಿತ್ತು. ಹಾಗಾಗಿಯೇ ‘ಉಳುವವನೆ ಭೂ ಒಡೆಯ’ ಎನ್ನುವ ಕ್ರಾಂತಿಕಾರಿ ಕಾನೂನನ್ನು ಜಾರಿಗೊಳಿಸಿ, ಜಮೀನ್ದಾರಿ ಜೀತಪದ್ಧತಿಯನ್ನು ನಿಷೇಧಿಸಿ ದಿನಗೂಲಿಯನ್ನು ಪರಿಚಯಿಸಿದ. ತೆರಿಗೆಯಲ್ಲಿ ರೈತಪರವಾದ ಗಣನೀಯ ಸುಧಾರಣೆ ಮಾಡಿದನು. ಇದಕ್ಕಾಗಿಯೇ ಸಣ್ಣಠೇವಣಿದಾರರಿಗೆ ಹೆಚ್ಚು ಲಾಭತರುವ ಸಹಕಾರಿ ಬ್ಯಾಂಕೊಂದನ್ನು ಸ್ಥಾಪಿಸಿದನು. ಸಣ್ಣ ಹಿಡುವಳಿಯ ರೈತರಿಗಾಗಿ ಅಲ್ಪಕಾಲೀನ ತಕಾವಿ ಸಾಲವನ್ನು ಜಾರಿಗೊಳಿಸಿದನು. ರೇಶ್ಮೆಯನ್ನು ಒಳಗೊಂಡಂತೆ ಹೊಸಬಗೆಯ ವಾಣಿಜ್ಯ ಬೆಳೆಗಳನ್ನು ಪರಿಚಯಿಸಲಾಯಿತು. ನೀರಾವರಿಗಾಗಿ ಟಿಪ್ಪುವಿನ ಮೈಸೂರು ಸಂಸ್ಥಾನದಲ್ಲಿ 39,000 ಕೆರೆ ಕಟ್ಟೆಗಳಿದ್ದು ಭಾರತದಲ್ಲೇ ಪ್ರಥಮ ಸ್ಥಾನದಲ್ಲಿತ್ತು. 1803-1804ರ ಅಂದಾಜಿನಂತೆ ಆಗ ಉಳುಮೆಯಾಗುತ್ತಿದ್ದ 30,12,397 ಎಕರೆ ಜಮೀನಿನಲ್ಲಿ 8,13,491 ಎಕರೆ ಜಮೀನು ನೀರಾವರಿಗೆ ಒಳಪಟ್ಟಿತ್ತು. ಮತ್ತೊಂದು ಅಂದಾಜಿನಂತೆ 1799ರ ವೇಳೆಗೆ ಶೇ.35ರಷ್ಟು ಭೂಮಿ ನೀರಾವರಿಗೆ ಒಳಪಟ್ಟಿತ್ತು. ಅಲ್ಲದೇ 1798ರಲ್ಲಿ ಇಂದು ಕೆ.ಆರ್.ಎಸ್. ಇರುವ ಜಾಗದಲ್ಲೇ ಕಾವೇರಿ ನದಿಗೆ ಬೃಹತ್ ಅಣೆಕಟ್ಟು ಕಟ್ಟುವ ಯೋಜನೆಗೆ ಟಿಪ್ಪು ಸರಕಾರ ಅಸ್ತಿಭಾರ ಹಾಕಿತ್ತು. ಹೀಗಾಗಿ ಥಾಮಸ್ ಮನ್ರೋ ‘‘...ಪ್ರತಿಯೊಂದು ಗ್ರಾಮವೂ ಒಂದು ಸಣ್ಣ ಗಣರಾಜ್ಯವಾಗಿತ್ತು’’ ಎನ್ನುತ್ತಾನೆ. ಟಿಪ್ಪುಕಾಲದ ಗ್ರಾಮಾಡಳಿತವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈಗಿನ ಪಂಚಾಯತ್ ರಾಜ್ ವ್ಯವಸ್ಥೆಯ ಬಹುಪಾಲು ಅಂಶಗಳನ್ನು ಟಿಪ್ಪು ತನ್ನ ಕಾಲದಲ್ಲೇ ಜಾರಿಗೊಳಿಸಿದ್ದನು.

ಡಿ.ಲಾಟೂರ್ ಎನ್ನುವ ವಿದ್ವಾಂಸ ಟಿಪ್ಪುವಿನ ದಿನಚರಿಯನ್ನು ವಿವರಿಸುತ್ತ, ‘‘..ಸಭಾಗೃಹಕ್ಕೆ ಬಂದು ಕುಳಿತಾಗ ಸಾರ್ವಜನಿಕರು ಬಂದು ತಮ್ಮ ಕುಂದುಕೊರತೆಗಳನ್ನು ಹೇಳಿಕೊಂಡು ಪರಿಹಾರ ಪಡೆಯುತ್ತಿದ್ದರು. ಮೂವತ್ತೋ ನಲವತ್ತೋ ಜನರಿದ್ದ ಕಾರ್ಯದರ್ಶಿಗಳು ಅವರಿಗೆ ಬಂದಿದ್ದ ಅಹವಾಲುಗಳ ಬಗೆಗೆ ಆದೇಶಗಳನ್ನು ಪಡೆದುಕೊಳ್ಳುತ್ತಿದ್ದರು. ಈ ಆದೇಶಗಳನ್ನು ಒಡನೆಯೇ ಸಂಬಂಧಿಸಿದ ಸಚಿವರುಗಳಿಗೆ ರವಾನಿಸಿ ಅತಿ ಶೀಘ್ರವಾಗಿ ಕ್ರಮಕೈಗೊಳ್ಳುವಂತೆ ಹೇಳಲಾಗುತ್ತಿತ್ತು ಎಂದು ಬರೆಯುತ್ತಾನೆ.’’ 

ಇಂದಿನ ಮುಖ್ಯಮಂತ್ರಿಗಳ ‘ಜನತಾ ದರ್ಶನ’ವನ್ನು ಟಿಪ್ಪುರಾಜಶಾಹಿಯಲ್ಲೇ ಆರಂಭಿಸಿದ್ದ ಎನ್ನುವುದನ್ನು ಗಮನಿಸಬೇಕು. 1793ರಲ್ಲಿ ಪ್ರಕಟಿಸಿದ ನೂತನ ಕಟ್ಟಳೆಗಳಲ್ಲಿ 126ನೇ ನಿಯಮದಲ್ಲಿ ಅಪರಾಧಕ್ಕೆ ದಂಡವಿಧಿಸುವ ಪದ್ಧ್ದತಿಯನ್ನು ರದ್ದು ಮಾಡಿ ತನ್ನ ಅಪರಾಧಕ್ಕೆ ಪೂರಕವಾಗಿ ಊರಿನ ಮುಂದೆ ಮಾವು ಮತ್ತು ಜಂಬುನೇರಳೆ ಮರಗಳನ್ನು ನೆಟ್ಟು ಅವುಗಳು ಫಲಕೊಡುವ ತನಕ ಬೆಳೆಸಬೇಕಾಗಿತ್ತು. ಇದು ಟಿಪ್ಪುವಿನ ದೂರದೃಷ್ಟಿ ಮತ್ತು ಪರಿಸರ ಪ್ರಜ್ಞೆಯನ್ನು ಕಾಣಿಸುತ್ತದೆ. 

ಬ್ರಿಟಿಷ್ ಉತ್ಪಾದನೆಯ ವಸ್ತುಗಳನ್ನು ತಿರಸ್ಕರಿಸುವ ಸ್ವದೇಶಿ ಚಳವಳಿ ಸ್ವಾತಂತ್ರ ಹೋರಾಟದ ಮುಖ್ಯ ಅಸ್ತ್ರವಾಗಿತ್ತು. ದಾದಾಬಾಯಿ ನವರೋಜಿ ಒಳಗೊಂಡಂತೆ ಗಾಂಧೀಜಿಯವರು ಈ ಚಳವಳಿಯನ್ನು ದೊಡ್ಡ ಪ್ರತಿರೋಧವಾಗಿ ರೂಪಿಸಿದರು. ಆದರೆ ಇಂತಹ ಸ್ವದೇಶಿ ಚಳವಳಿಯನ್ನು ನಿಜಾರ್ಥದಲ್ಲಿ ಆರಂಭಿಸಿದ್ದು ಟಿಪ್ಪು. ತನ್ನ ಕಾಲದಲ್ಲಿ ಬ್ರಿಟಿಷರ ಎಲ್ಲಾ ವ್ಯವಹಾರಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವಂತೆ ಆದೇಶಿಸಿದನು. ಇದಕ್ಕೆ ಪರ್ಯಾಯವಾಗಿ ಸ್ವದೇಶಿ ಉತ್ಪಾದನೆಯನ್ನು ವ್ಯಾಪಕವಾಗಿ ಆರಂಭಿಸಿದ. ಟಿಪ್ಪುಕಾಲದಲ್ಲಿ ಕಾರ್ಖಾನೆಗಳ ಸ್ಥಾಪನೆಯ ಜತೆ ಬಂಡವಾಳಶಾಹಿಯ ಉಗಮವೂ ಆಯಿತು. ಆದರೆ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳೆಲ್ಲವೂ ಸರಕಾರದ ಹಿಡಿತದಲ್ಲಿದ್ದವು.

ಮದ್ಯ ಮತ್ತು ಇತರ ಮಾದಕ ವಸ್ತುಗಳು, ವೇಶ್ಯಾವಾಟಿಕೆ, ಮನೆಗೆಲಸಕ್ಕೆ ಗುಲಾಮ ಹೆಂಗಸರನ್ನು ನೇಮಿಸಿಕೊಳ್ಳುವುದು, ಮಲಬಾರಿನಲ್ಲಿದ್ದ ಬಹುಪತ್ನಿತ್ವ, ಮಲಬಾರಿನ ಹೆಂಗಸರು ಸೊಂಟದ ಮೇಲ್ಭಾಗವನ್ನು ಮುಚ್ಚಿಕೊಳ್ಳುವಂತಿಲ್ಲ ಎನ್ನುವ ಆಚರಣೆ, ಮೈಸೂರು ನಗರದ ಬಳಿಯ ಕಾಳಿ ದೇಗುಲದಲ್ಲಿ ನಡೆಯುತ್ತಿದ್ದ ನರಬಲಿ, ಮದುವೆಯ ದುಂದುವೆಚ್ಚ ಈ ಎಲ್ಲವುಗಳನ್ನು ಟಿಪ್ಪುನಿಷೇಧಿಸಿದ. ಸಂಪೂರ್ಣ ಮದ್ಯಪಾನ ನಿಷೇಧವನ್ನು ಜಾರಿಗೆ ತಂದಾಗ 1787ರಲ್ಲಿ ಮೀರ್‌ಸಾದಿಕ್‌ಗೆ ಬರೆದ ಪತ್ರವೊಂದರಲ್ಲಿ ‘‘ಈ ವಿಷಯದಲ್ಲಿ ಮಾತ್ರ ನಾವು ಯಾವುದೇ ಹಣಕಾಸಿನ ವಿಷಯವನ್ನು ಪ್ರಧಾನಗೊಳಿಸಿ ನೋಡಬಾರದು. ಏನೇ ಆದರೂ ಸಂಪೂರ್ಣ ಮದ್ಯಪಾನ ನಿಷೇಧ ಮಾತ್ರ ಜಾರಿಗೆ ಬರಲೇಬೇಕು. ನಾವು ನಮ್ಮ ಜನತೆಯ ಆರ್ಥಿಕ ಸದೃಢತೆ, ನೈತಿಕ ಔನತ್ಯಗಳನ್ನು ಪ್ರಧಾನವಾಗಿ ಪರಿಗಣಿಸಬೇಕು. ನಮ್ಮ ಯುವಕರಲ್ಲಿ ಸನ್ನಡತೆಯನ್ನು ಬೆಳೆಸಬೇಕು. ಖಜಾನೆಯ ಹಣಕಾಸಿನ ವಿಷಯ ಪ್ರಮುಖವಾದರೂ ಅದು ನಮ್ಮ ಜನತೆಯ ಆರೋಗ್ಯ ಹಾಗೂ ನೈತಿಕತೆಗಿಂತಲೂ ಮುಖ್ಯವಾದದ್ದೇ?’’ ಎಂದು ಪ್ರಶ್ನಿಸಿದ್ದ. ಇಂತಹ ದೃಢ ನಿರ್ಧಾರಗಳು ಟಿಪ್ಪುವಿನ ಪ್ರಜಾಪ್ರಭುತ್ವೀಯ ಗುಣಗಳನ್ನು ತೋರುತ್ತವೆ. ಈ ಎಲ್ಲಾ ಕಾರಣಗಳಿಗಾಗಿ ಆಧುನಿಕ ಪ್ರಜಾಪ್ರಭುತ್ವವಾದಿ ಟಿಪ್ಪುವನ್ನು ಕನ್ನಡ ನಾಡಿನ ಮಕ್ಕಳಿಗೆ ಪಠ್ಯದಲ್ಲಿ ಪರಿಚಯಿಸದೆ ಇರುವುದು ಒಂದು ಸಾಂಸ್ಕೃತಿಕ ಅಪರಾಧವೇ ಸರಿ.

Writer - ಅರುಣ್ ಜೋಳದಕೂಡ್ಲಿಗಿ

contributor

Editor - ಅರುಣ್ ಜೋಳದಕೂಡ್ಲಿಗಿ

contributor

Similar News