ಕೊರೋನ ಸಂಬಂಧಿ ಅಪೌಷ್ಟಿಕತೆಯಿಂದ ತಿಂಗಳಿಗೆ 10,000 ಮಕ್ಕಳ ಸಾವು: ವಿಶ್ವಸಂಸ್ಥೆ ವರದಿ

Update: 2020-07-29 17:51 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಜು. 29: ಕೊರೋನ ವೈರಸ್ ಸಾಂಕ್ರಾಮಿಕ ಮತ್ತು ಅದಕ್ಕೆ ಸಂಬಂಧಿಸಿದ ನಿರ್ಬಂಧಗಳಿಂದಾಗಿ ಈಗಾಗಲೇ ಹಸಿವಿನಿಂದ ಬಳಲುತ್ತಿರುವ ಸಮುದಾಯಗಳು ಮತ್ತಷ್ಟು ತೀವ್ರ ಪರಿಣಾಮಗಳಿಗೆ ಒಳಗಾಗಿವೆ ಹಾಗೂ ತಿಂಗಳೊಂದರಲ್ಲಿ ಈಗಾಗಲೇ ಸಾಯುತ್ತಿರುವ ಮಕ್ಕಳಿಗಿಂತ ಇನ್ನೂ ಸುಮಾರು 10,000 ಹೆಚ್ಚು ಮಕ್ಕಳು ಸಾಯುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ.

ಈ ದುರ್ಬಲ ಸಮುದಾಯಗಳು ಬೆಳೆಯುವ ಅಲ್ಪ ಕೃಷಿ ಉತ್ಪನ್ನಗಳು ಕೊರೋನ ಸಾಂಕ್ರಾಮಿಕ ಅವಧಿಯಲ್ಲಿ ಮಾರುಕಟ್ಟೆಗಳನ್ನು ತಲುಪುತ್ತಿಲ್ಲ ಹಾಗೂ ಹಳ್ಳಿಗಳಿಗೆ ಆಹಾರ ಮತ್ತು ವೈದ್ಯಕೀಯ ನೆರವು ಲಭಿಸುತ್ತಿಲ್ಲ ಎಂದು ಅದು ಹೇಳಿದೆ.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಹೆಚ್ಚುತ್ತಿರುವ ಅಪೌಷ್ಟಿಕತೆಯು ದೀರ್ಘಾವಧಿ ಪರಿಣಾಮಗಳನ್ನು ಬೀರುತ್ತದೆ ಹಾಗೂ ಅದು ವೈಯಕ್ತಿಕ ದುರಂತಗಳನ್ನು ತಲೆಮಾರೊಂದರ ವಿನಾಶವನ್ನಾಗಿ ಮಾಡುತ್ತದೆ ಎಂದು ವಿಶ್ವಸಂಸ್ಥೆಯ ನಾಲ್ಕು ಘಟಕಗಳು ಎಚ್ಚರಿಸಿವೆ ಹಾಗೂ ಇದನ್ನು ತಡೆಯಲು ತಕ್ಷಣ ಕಾರ್ಯಪ್ರವೃತ್ತವಾಗುವಂತೆ ಕರೆ ನೀಡಿವೆ.

ಪ್ರತಿ ತಿಂಗಳು 5.50 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದು ಮಕ್ಕಳಲ್ಲಿ ಕಡ್ಡಿಯಂಥ ಕೈಕಾಲುಗಳು ಮತ್ತು ಉಬ್ಬಿದ ಹೊಟ್ಟೆಗಳಿಗೆ ಕಾರಣವಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಪೌಷ್ಟಿಕತೆ ಮತ್ತು ಬೆಳವಣಿಗೆ ಸ್ಥಗಿತವು ಮಕ್ಕಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಶಾಶ್ವತ ಹಾನಿಯನ್ನು ಉಂಟು ಮಾಡುತ್ತದೆ.

‘‘ಆಹಾರ ಭದ್ರತೆಗೆ ಕೋವಿಡ್ ಬಿಕ್ಕಟ್ಟು ನೀಡಿರುವ ಹೊಡೆತದ ಪರಿಣಾಮವು ಮುಂದಿನ ಹಲವಾರು ವರ್ಷಗಳಲ್ಲಿ ಗೋಚರಿಸಲಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪೌಷ್ಟಿಕತೆ ವಿಭಾಗದ ಮುಖ್ಯಸ್ಥ ಪ್ರಾನ್ಸೆಸ್ಕೊ ಬ್ರಾಂಕ ಹೇಳಿದರು.

ಜಾಗತಿಕ ಹಸಿವನ್ನು ನೀಗಿಸಲು ಕನಿಷ್ಠ 2.4 ಬಿಲಿಯ ಡಾಲರ್ (ಸುಮಾರು 17,970 ಕೋಟಿ ರೂಪಾಯಿ) ತುರ್ತು ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ನಾಲ್ಕು ಘಟಕಗಳಾದ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್, ವಿಶ್ವ ಆಹಾರ ಕಾರ್ಯಕ್ರಮ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಗಳ ನಾಯಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News