ಪುತ್ತೂರು: ಕೆಕೆಎಂಎ ಡ್ರೀಮ್ ಹೌಸ್ ಯೋಜನೆ; ಇಬ್ಬರು ವಿಧವೆಯರಿಗೆ ಹೊಸ ಮನೆಗಳ ಕೀ ಹಸ್ತಾಂತರ

Update: 2020-07-30 07:31 GMT

ಮಂಗಳೂರು, ಜು.30: ಕೆಕೆಎಂಎ ಡ್ರೀಮ್ ಹೌಸ್ (ಮನೆಯಿಲ್ಲದವರಿಗೆ ಮನೆ) ಯೋಜನೆಯಡಿ, ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಷನ್‌ನ ಕರ್ನಾಟಕ ಶಾಖೆಯು ಪುತ್ತೂರು ತಾಲೂಕಿನ ನೆಲ್ಯಾಡಿಯಲ್ಲಿ ಎರಡು ಹೊಸ ಮನೆಗಳನ್ನು ನಿರ್ಮಿಸಿದ್ದು, ಮನೆಯ ಕೀಗಳನ್ನು ಇಬ್ಬರು ವಿಧವೆಯರಿಗೆ ಈದುಲ್ ಅಝ್ ಹಾ ಉಡುಗೊರೆಯಾಗಿ ಹಸ್ತಾಂತರಿಸಲಾಯಿತು.

ಮಂಗಳೂರು ಸೀ ಫುಡ್ ಬಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಂ ಬಾಷಾ, ಮಂಗಳೂರಿನ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಎಚ್‌ಐಎಫ್) ಅಧ್ಯಕ್ಷ ಸಾಜಿದ್ ಎ.ಕೆ, ಕೆಕೆಎಂಎ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಎಸ್.ಎಂ ಫಾರೂಕ್, ರಿಲೀಜಿಯಸ್ ಅಫೈರ್ಸ್ ಕರ್ನಾಟಕ ಶಾಖೆಯ ಉಪಾಧ್ಯಕ್ಷ ಅಬೂಬಕ್ಕರ್ ತುಂಬೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ನೆಲ್ಯಾಡಿಯ ಬೈಲ್ ಮನೆಯ ಕೀಯನ್ನು ಎಸ್.ಎಂ. ಬಾಷಾ ಮತ್ತು ಇತರ ಗಣ್ಯರು ಹಾಗೂ ನೆಲ್ಯಾಡಿಯ ಅಲಂಪಾಡಿಯ ಮನೆಯ ಕೀಯನ್ನು ಸಾಜಿದ್ ಎ.ಕೆ. ಅವರು ಹಸ್ತಾಂತರಿಸಿದರು.

ಬದ್ರಿಯಾ ಜುಮಾ ಮಸೀದಿ ನೆಲ್ಯಾಡಿ ಖತೀಬ್ ಹನೀಫ್ ಸಖಾಫಿ, ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಮತ್ತು ಹಾಲಿ ಸಮಿತಿ ಸದಸ್ಯ ವಕೀಲ ಇಸ್ಮಾಯಿಲ್, ಜಮಾಅತ್ ಕಾರ್ಯದರ್ಶಿ ಅಬ್ದುಲ್ ಖಾದರ್, ಖಜಾಂಚಿ ತಾಜ್ ಉಮರ್, ಜಮಾತ್ ಮಾಜಿ ಅಧ್ಯಕ್ಷ ಸಿಟಿ ಅಬ್ಬು ಉಪಸ್ಥಿತರಿದ್ದರು. ಹನೀಫ್ ಸಖಾಫಿ ಪ್ರಾರ್ಥನೆ ಮಾಡಿದರು. ಎರಡು ಮನೆಗಳ ಗುತ್ತಿಗೆದಾರ ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.

ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಷನ್ ​​ಪ್ರಮುಖ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಲವಾರು ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಕೆಕೆಎಂಎ ಕರ್ನಾಟಕ ಶಾಖೆಯು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಮನೆಯಿಲ್ಲದವರಿಗಾಗಿ 11 ಮನೆಗಳನ್ನು ಹಸ್ತಾಂತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News