ಉಡುಪಿ: ಪರಿಹಾರ ವಿತರಣೆ ಅವಧಿ ವಿಸ್ತರಿಸಲು ಆಗ್ರಹಿಸಿ ಕಾರ್ಮಿಕರ ಧರಣಿ
ಉಡುಪಿ, ಜು.30: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ(ಸಿಐಟಿಯು) ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿಯಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಇಂದು ಧರಣಿ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲೆಯ ಮರಳು ಸಮಸ್ಯೆ ಮುಂದುವರೆಯುತ್ತಿರುವುದರಿಂದ ಕಟ್ಟಡ ಕಾರ್ಮಿಕರಿಗೆ ಕೆಲಸ ಇಲ್ಲವಾಗಿದೆ. ಆದುದರಿಂದ ಜಿಲ್ಲೆಯ ಎಲ್ಲ ನದಿ ಗಳಲ್ಲಿರುವ ಮರಳು ಜನರ ಕೈಗೆ ಸಿಗುವಂತೆ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಘೋಷಿಸಿರುವ 5000ರೂ. ಪರಿಹಾರದ ವಿತರಣೆ ಅವಧಿ ವಿಸ್ತರಿಸಬೇಕು. ಕಾರ್ಮಿಕರಿಗೆ ಹೆಚ್ಚು ವರಿ ಕೋವಿಡ್ ಪರಿಹಾರವನ್ನು ಘೋಷಿಸಬೇಕು. ಮದುವೆ, ಪಿಂಚಣಿ, ಮರಣ ಪರಿಹಾರ ಅವಧಿಯನ್ನು ವಿಸ್ತರಿಸಬೇಕು. ಸೇವಾಸಿಂಧು ಕೇಂದ್ರಗಳು ಮತ್ತು ಕಾರ್ಮಿಕ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಗಳ ಹುದ್ದೆಯನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಕುರಿತ ಮನವಿಯನ್ನು ಅಪರ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶೇಖರ್ ಬಂಗೇರ, ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಕಾರ್ಯದರ್ಶಿ ಕವಿರಾಜ್ ಎಸ್., ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ವೆಂಕಟೇಶ್ ಕೋಣಿ, ದಯಾನಂದ್ ಕೋಟ್ಯಾನ್, ಗಣೇಶ ನಾಯ್ಕ ಉಪಸ್ಥಿತರಿದ್ದರು.