ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಆರೋಪ: ತನಿಖೆಗೆ ಎಸ್‌ಡಿಪಿಐ ಒತ್ತಾಯ

Update: 2020-07-30 13:26 GMT

ಮಂಗಳೂರು, ಜು.30: ಕೋವಿಡ್ ಸಾಂಕ್ರಾಮಿಕ ರೋಗದ ಚಿಕಿತ್ಸೆಗೆಂದು ರಾಜ್ಯ ಸರಕಾರ ವೈದ್ಯಕೀಯ ಉಪಕರಣ ಹಾಗೂ ಬಳಕೆ ಸಾಮಗ್ರಿ ಖರೀದಿಯಲ್ಲಿ ಕೋಟ್ಯಂತರ ರೂ. ಹಗರಣ ನಡೆಸಿದ್ದು, ಕೂಡಲೇ ತನಿಖೆ ನಡೆಸಬೇಕು ಎಂದು ಎಸ್‌ಡಿಪಿಐ ಒತ್ತಾಯಿಸಿದೆ.

ನಗರದ ಸ್ಟೇಟ್‌ಬ್ಯಾಂಕ್‌ನ ಎಸ್‌ಡಿಪಿಐ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ರಾಜ್ಯ ಸರಕಾರದಿಂದ ವೈದ್ಯಕೀಯ ಉಪಕರಣಗಳು ಹಾಗೂ ಬಳಕೆ ಸಾಮಾಗ್ರಿಗಳನ್ನು ಖರೀದಿಸಿರುವುದರಲ್ಲಿ 2,000 ಕೋಟಿ ರೂ. ಅವ್ಯವಹಾರ ನಡೆಸಿದೆ. ಸ್ಯಾನಿಟೈಸರ್, ಥರ್ಮಲ್ ಸ್ಕಾನರ್ ಹಾಗೂ ವೆಂಟಿಲೇಟರ್ ಖರೀದಿಯಲ್ಲಿ ಕೂಡ ಭಾರೀ ಅವ್ಯವಹಾರ ನಡೆದಿದೆ ಎಂದರು.

ಕೋವಿಡ್ ಸಾಂಕ್ರಾಮಿಕದಿಂದ ಜನತೆ ಆತಂಕದಲ್ಲಿರುವಾಗಲೇ ಜನತೆಯ ಹಣ ದೋಚಿದ ಸರಕಾರ ರಾಜ್ಯವನ್ನು ಲೂಟಿಗೈಯುತ್ತಿದೆ. ಜಂಟಿ ಸದನ ಸಮಿತಿಯಿಂದ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ರಾಜ್ಯದ ಹಲವೆಡೆಗಳಲ್ಲಿ ಎಸ್‌ಡಿಪಿಐ ಪ್ರತಿಭಟನೆ ನಡೆಸಿದರೂ ಬಿಜೆಪಿ ಸರಕಾರ ಈ ಬಗ್ಗೆ ತನಿಖೆ ನಡೆಸಲು ಹಿಂಜರಿಯುತ್ತಿದೆ ಎಂದು ಹೇಳಿದರು.

ದೇಶದ ಅಪ್ರತಿಮ ಸ್ವಾತಂತ್ರ ಸೇನಾನಿ, ರಾಕೆಟ್ ತಂತ್ರಜ್ಞಾನದ ಜನಕ ಟಿಪ್ಪುಸುಲ್ತಾನ್ ದೇಶದ ಹೆಮ್ಮೆಯಾಗಿದ್ದಾರೆ. ಅಮೆರಿಕ, ಯುರೋಪ್ ಮುಂತಾದ ರಾಷ್ಟ್ರಗಳಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಕಾಲೇಜ್ ಮತ್ತು ಯುನಿವರ್ಸಿಟಿಗಳಲ್ಲಿ ಅಧ್ಯಯನ ಪಠ್ಯಗಳಿವೆ. ಜಗತ್ತಿನಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಟಿಪ್ಪುಗೆ ವಿಶೇಷ ಮನ್ನಣೆ ಇದೆ. ನಾಸಾದಲ್ಲಿ ಟಿಪ್ಪುವಿನ ವೈಜ್ಞಾನಿಕ ಕೊಡುಗೆ ಗೌರವ ನೀಡಲಾಗಿದೆ. ಆದರೆ ರಾಜ್ಯ ಬಿಜೆಪಿ ಸರಕಾರದ ಕೋಮುವಾದಿ ಮನೋಭಾವನೆ ಮಾತ್ರ ಕನ್ನಡದ ಮಣ್ಣಿಗೆ ಮತ್ತು ವಿರೋಚಿತ ಇತಿಹಾಸಕ್ಕೆ ಮಸಿ ಬಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

7ನೇ ತರಗತಿಯಲ್ಲಿ ರಾಣಿ ಅಬ್ಬಕ್ಕ, ಸಂವಿಧಾನ, ಜಾತ್ಯತೀತತೆ ಪ್ರಜಾಪ್ರಭುತ್ವ ಮುಂತಾದ ವಿಷಯಗಳನ್ನು ಒಳಗೊಂಡ ಪಠ್ಯವನ್ನು ಸಹ ಕಡಿತ ಮಾಡುವುದರ ಜೊತೆಗೆ 6ನೇ ತರಗತಿಯಲ್ಲೂ ಮೌರ್ಯರ ಆಡಳಿತ, ಕರ್ನಾಟಕ ಏಕೀಕರಣದಲ್ಲಿ ಸಾಹಿತ್ಯಗಳ ಪಾತ್ರ, ನಾರಾಯಣಗುರು ಮುಂತಾದ ಪಠ್ಯಗಳನ್ನೂ ಕಡಿತಗೊಳಿಸುವ ದುರಾಲೋಚನೆ ಇಟ್ಟುಕೊಂಡಿರುವುದು ಸಲ್ಲದು ಎಂದರು.

ಸಂವಿಧಾನ ರಚನೆಯಲ್ಲಿ ಪಾಲುದಾರರಲ್ಲದ ಹಿಂದುತ್ವ ಪ್ರತಿಪಾದಕರು ಇತಿಹಾಸವನ್ನು ಮರೆಮಾಚಿ ಸುಳ್ಳುಭರಿತ ಮತ್ತು ಕಪೋಲಕಲ್ಪಿತ ಅಂತೆ-ಕಂತೆಗಳಿಂದ ಯುವ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ. ಸರಕಾರ ಟಿಪ್ಪು ಅಧ್ಯಾಯದ ಜೊತೆಗೆ ಇತರ ಪಠ್ಯಗಳನ್ನೂ 7ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಬೇಕೆಂದು ಇಲ್ಯಾಸ್ ಮುಹಮ್ಮದ್ ತುಂಬೆ ಆಗ್ರಹಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಅಬ್ದುಲ್ ಜಲೀಲ್ ಕೆ., ರಾಜ್ಯ ಕಾರ್ಯದರ್ಶಿ ಹಾಗೂ ಮಂಡಳಿ ಸದಸ್ಯ ಅಕ್ರಮ್ ಹಸನ್, ದ.ಕ. ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐ.ಎಂ.ಆರ್. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News