ಕರ್ತವ್ಯದಲ್ಲಿ ಸವಾಲುಗಳೇ ಅಧಿಕ: ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮಿತ ಡಿಸಿ ಸಿಂಧೂ ರೂಪೇಶ್

Update: 2020-07-30 13:35 GMT

ಮಂಗಳೂರು, ಜು.30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದಾಗ ಪ್ರತೀದಿನವೂ ವಿನೂತನ. ಕರ್ತವ್ಯ ಸಂದರ್ಭದಲ್ಲಿ ಸವಾಲುಗಳೇ ಅಧಿಕವಾಗಿದ್ದವು ಎಂದು ದ.ಕ. ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ತಮಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ದಿನವೂ ಒಂದಲ್ಲೊಂದು ಸಮಸ್ಯೆ, ಸವಾಲು, ಘಟನೆಗಳು ಬರುತ್ತಿದ್ದವು. ಎಲ್ಲರ ಸಹಕಾರದಿಂದ ಇವುಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಸಿಗುವ ಕರ್ತವ್ಯದ ಅನುಭವ ಹಾಗೂ ಪ್ರಾವೀಣ್ಯತೆ ಅನನ್ಯ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದರೆ, ಅದರಿಂದ ಬರುವ ನೆಮ್ಮದಿಯು ಸೇವೆಯ ಸಾರ್ಥಕತೆ ಮೂಡಿಸುತ್ತದೆ. ಪ್ರತಿಯೊಬ್ಬ ಸರಕಾರಿ ನೌಕರರು ಈ ದಿಸೆಯಲ್ಲಿ ಮುಂದುವರಿಯಬೇಕು ಎಂದು ಅವರು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ಸಿಂಧೂ ರೂಪೇಶ್ ಜಿಲ್ಲಾಧಿಕಾರಿಯಾಗಿ 11 ತಿಂಗಳ ಸೇವೆಯಲ್ಲಿ ಅವರು ಸಾಕಷ್ಟು ಸವಾಲುಗಳು ಎದುರಿಸಿದ್ದಾರೆ. ನೆರೆ, ಕೋವಿಡ್ ನಿರ್ವಹಣೆ, ವಲಸೆ ಕಾರ್ಮಿಕರ ರವಾನೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಚಾರ ಮತ್ತಿತರ ಘಟನೆಗಳಲ್ಲಿ ಸೂಕ್ತ ಸಂದರ್ಭ ನಿರ್ಣಾಯಕ ನಿರ್ಧಾರ ಕೈಗೊಂಡಿದ್ದಾರೆ. ಅಬ್ಬಕ್ಕ ಉತ್ಸವ, ಕರಾವಳಿ ಉತ್ಸವಗಳಲ್ಲಿ ಹಣಕಾಸು ಶಿಸ್ತು ಜಾರಿಗೆ ತಂದಿದ್ದರು ಎಂದು ಹೇಳಿದರು.

ನೂತನ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ಮಂಗಳೂರು ಪೊಲೀಸ್ ಆಯುಕ್ತಾಲಯದ ಡಿಸಿಪಿ ಅರುಣಾಂಶಗಿರಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ವಂದಿಸಿದರು.

ಕೋವಿಡ್ ನಿರ್ವಹಣೆಯು ದೊಡ್ಡ ಸವಾಲಾಗಿತ್ತು. ಇದರೊಂದಿಗೆ ಸಾರ್ವಜನಿಕರ ಸಮಸ್ಯೆಗಳಿಗೂ ಪರಿಹಾರ ನೀಡುವ ಹೊಣೆಯೂ ಇತ್ತು. ಇದರಲ್ಲಿ ಜಿಲ್ಲೆ ಸಾಕಷ್ಟು ಪ್ರಗತಿ ಕಂಡಿದೆ. ಕೋವಿಡ್ ವಿರುದ್ಧ ಇನ್ನಷ್ಟು ಹೋರಾಡಬೇಕಾದ ಅಗತ್ಯವಿದೆ.
- ಸಿಂಧೂ ಬಿ. ರೂಪೇಶ್, ನಿರ್ಗಮಿತ ಜಿಲ್ಲಾಧಿಕಾರಿ

ಸವಾಲುಗಳು ಇರುವ ಜಿಲ್ಲೆಯಲ್ಲಿ ಕೆಲಸ ಮಾಡುವುದು ಉತ್ತಮ ಅನುಭವ ನೀಡುತ್ತದೆ. ಕೋವಿಡ್ ಸಂದರ್ಭದಲ್ಲಿ ಕುಟುಂಬದಿಂದಲೂ ದೂರ ಇದ್ದು, ಕರ್ತವ್ಯ ನಿರ್ವಹಿಸಿದ ಸಿಂಧೂ ರೂಪೇಶ್ ಅವರ ಕರ್ತವ್ಯ ಮಾದರಿಯಾಗಿದೆ.
ಡಾ.ಕೆ.ವಿ. ರಾಜೇಂದ್ರ, ನೂತನ ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News