ಕೊರೋನ ವೈರಸ್‌ ರೋಗ ನಿಯಂತ್ರಣಕ್ಕೆ ಆದ್ಯತೆ: ನೂತನ‌ ದ.ಕ. ಜಿಲ್ಲಾಧಿಕಾರಿ ರಾಜೇಂದ್ರ

Update: 2020-07-30 14:42 GMT

ಮಂಗಳೂರು, ಜು.30: ದ.ಕ.ಜಿಲ್ಲೆಯಲ್ಲಿ ಕೊರೋನ ವೈರಸ್ ರೋಗ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು‌ ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಾ ಕೆ.ವಿ. ರಾಜೇಂದ್ರ ಹೇಳಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರ್ಗಮನ ಡಿಸಿ ಸಿಂಧೂ ಬಿ. ರೂಪೇಶ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಸಕ್ತ ಕೊರೋನ ಸಮಸ್ಯೆ ಜಿಲ್ಲೆಯಲ್ಲಿ ಬಹುವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ವಿಶೇಷ ಆದ್ಯತೆ ನೀಡಲಾಗುವುದು. ಅದಕ್ಕಾಗಿ ಜಿಲ್ಲೆಯ ಅಧಿಕಾರಿ ತಂಡದ ಜತೆಗೆ ಚರ್ಚೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಲಾಗುವುದು ಎಂದರು.

ದ.ಕ. ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದೇನೆ. ಕೊರೋನ ನಿಯಂತ್ರಣಕ್ಕೆ ವಿವಿಧ ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ. ಕೊರೋನ ನಿಯಂತ್ರಣವೇ ನಮ್ಮ ಮುಂದಿರುವ ಬಹು ದೊಡ್ಡ ಸವಾಲಾಗಿದೆ. ಇದನ್ನು ನಿರ್ವಹಿಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದರು. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಇರುವ ಕಾರಣ ಇಲ್ಲಿನ ಒಟ್ಟು ಚಿತ್ರಣ ಗಮನಿಸಿದ್ದೇನೆ. ಕೊರೋನ ಅಲ್ಲದೆ ಇಲ್ಲಿನ ಇತರ ವಿಚಾರಗಳ ಬಗ್ಗೆಯೂ ಹಂತ ಹಂತವಾಗಿ ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.   

ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಬೆಂಗಳೂರಿನ ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸ್ (ಇಡಿಸಿಎಸ್), ಡಿಪಿ ಆ್ಯಂಡ್ ಎಆರ್ (ಇ-ಗವರ್ನೆನ್ಸ್) ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದು, ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಈ ಸಂದರ್ಭ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News