×
Ad

ದ.ಕ. ಜಿಲ್ಲೆಯಲ್ಲಿ ಕೋವಿಡ್‌ಗೆ ಮತ್ತೆ ಎಂಟು ಮಂದಿ ಬಲಿ: ಹೊಸದಾಗಿ 198 ಮಂದಿಗೆ ಸೋಂಕು

Update: 2020-07-30 20:23 IST

ಮಂಗಳೂರು, ಜು.30: ದ.ಕ. ಜಿಲ್ಲೆಯಲ್ಲಿ ಕೋವಿಡ್ ನಾಗಾಲೋಟ ಮುಂದುವರಿದಿದ್ದು, ಗುರುವಾರ 198 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಕೊರೋನ ಸೋಂಕಿನಿಂದಾಗಿ ಮತ್ತೆ ಎಂಟು ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 150ಕ್ಕೆ ಏರಿದೆ.

ಕೊರೋನ ಸೋಂಕಿನೊಂದಿಗೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಎಂಟು ಮಂದಿ ಮೃತಪಟ್ಟಿದ್ದಾರೆ. ಮಂಗಳೂರಿನ ನಾಲ್ವರು, ಪುತ್ತೂರಿನ ಇಬ್ಬರು, ದಾವಣಗೆರೆ ಮತ್ತು ಮೈಸೂರಿನ ಓರ್ವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇದರಲ್ಲಿ ನಾಲ್ವರು ಮಹಿಳೆಯರು, ನಾಲ್ವರು ಪುರುಷರಿದ್ದಾರೆ.

ಮಂಗಳೂರಿನ 60 ವರ್ಷದ ವೃದ್ಧೆ ಹೈಪೊಕ್ಷೆಮಿಯ, ತೀವ್ರ ಉಸಿರಾಟ ತೊಂದರೆ, ನಗರದ 52 ವರ್ಷದ ಪುರುಷ ತೀವ್ರ ಪರಿಧಮನಿ ಕಾಯಿಲೆ, ಶ್ವಾಸಕೋಶ ಸಮಸ್ಯೆ, ನಗರದ 87 ವರ್ಷದ ವೃದ್ಧೆ ತೀವ್ರ ಉಸಿರಾಟ ತೊಂದರೆ, ಹೈಪೊಕ್ಷೆಮಿಯ, ನಗರದ 57 ವರ್ಷದ ಪುರುಷ ಹೈಪೊಕ್ಷೆಮಿಯ, ತೀವ್ರ ಉಸಿರಾಟ ತೊಂದರೆ, ಮೂತ್ರಪಿಂಡ ವೈಫಲ್ಯ, ತೀವ್ರ ಪರಿಧಮನಿ ಕಾಯಿಲೆಯಿಂದ ಬಳಲುತ್ತಿದ್ದರು.

ಪುತ್ತೂರಿನ 36 ವರ್ಷದ ಮಹಿಳೆ ತೀವ್ರ ಉಸಿರಾಟ ತೊಂದರೆ, ಹೈಪೊಕ್ಷೆಮಿಯ, ಸೆಪ್ಟಿಕ್ ಶಾಕ್, ಮೂತ್ರಪಿಂಡ ವೈಫಲ್ಯ, ಪುತ್ತೂರಿನ 64 ವರ್ಷದ ವೃದ್ಧ ಹೈಪೊಕ್ಷೆಮಿಯ, ತೀವ್ರ ಉಸಿರಾಟ ತೊಂದರೆ, ದಾವಣಗೆರೆಯ 60 ವರ್ಷದ ವೃದ್ಧೆ ತೀವ್ರ ಉಸಿರಾಟದ ಸೋಂಕು, ದೀರ್ಘಕಾಲದ ಮಧುಮೇಹ, ಅಧಿಕ ರಕ್ತದೊತ್ತಡ, ಮೈಸೂರಿನ 75 ವರ್ಷದ ವೃದ್ಧ ಅಸ್ತಮಾ, ಅಧಿಕ ರಕ್ತದೊತ್ತಡ, ನ್ಯುಮೋನಿಯದಿಂದ ಬಳಲುತ್ತಿದ್ದರು. ಮೃತಪಟ್ಟ ಎಲ್ಲರಲ್ಲೂ ಕೊರೋನ ಸೋಂಕು ದೃಢಪಟ್ಟಿತ್ತು ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

198 ಮಂದಿಗೆ ಸೋಂಕು: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಗುರುವಾರವೂ 198 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,509ಕ್ಕೆ ಏರಿಕೆಯಾಗಿದೆ.
ಸೋಂಕಿತರ ಪೈಕಿ 27 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದರೆ, ಸಾಮಾನ್ಯ ಶೀತಜ್ವರ ಪ್ರಕರಣ 80, ಉಸಿರಾಟ ಸಮಸ್ಯೆಯ 14 ಪ್ರಕರಣ ಮತ್ತು ಅಂತಾರಾಷ್ಟ್ರೀಯ ಪ್ರಯಾಣ ಮಾಡಿದ ನಾಲ್ಕು ಮಂದಿಯಲ್ಲಿ ಸೋಂಕು ಕಂಡುಬಂದಿದೆ. 73 ಮಂದಿಯ ಸೋಂಕಿನ ಮೂಲ ನಿಗೂಢವಾಗಿದೆ.

ಇದೇ ವೇಳೆ 105 ಮಂದಿ ಗುಣಮುಖರಾಗಿ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್‌ಗಳಿಂದ ಗುರುವಾರ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ 2,561 ಮಂದಿ ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದಾರೆ. ಸದ್ಯ 2,800 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News