ಸಿಇಟಿ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 2,988 ವಿದ್ಯಾರ್ಥಿಗಳು ಗೈರು
ಮಂಗಳೂರು, ಜು.30: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ದ.ಕ. ಜಿಲ್ಲೆಯ 17 ಕೇಂದ್ರಗಳಲ್ಲಿ ಸೂಸೂತ್ರವಾಗಿ ನೆರವೇರಿದ್ದು, ಗುರುವಾರ ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆದಿದೆ. ಜೀವಶಾಸ್ತ್ರ ಪರೀಕ್ಷೆಗೆ ಒಟ್ಟು 2,988 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಜೀವಶಾಸ್ತ್ರ ಪರೀಕ್ಷೆಗೆ 7,634 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 2,988 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದರು. 6,482 ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದರೆ, 1,152 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 456 ಮಂದಿ ಕಾಸರಗೋಡಿನವರು. ಈ ಎಲ್ಲ ವಿದ್ಯಾರ್ಥಿಗಳನ್ನು ಕೇರಳ ಗಡಿಯಿಂದ ಪರೀಕ್ಷಾ ಕೇಂದ್ರಗಳಿಗೆ ಕರೆತರಲು ದ.ಕ. ಜಿಲ್ಲಾಡಳಿತವು ವಿಶೇಷ ಬಸ್ಸುಗಳನ್ನು ಏರ್ಪಾಡು ಮಾಡಿದ್ದರೆ, ಕಾಸರಗೋಡಿನಿಂದ ಗಡಿ ಭಾಗದವರೆಗೆ ಅಲ್ಲಿನ ಜಿಲ್ಲಾಡಳಿತ ಕರೆತಂದು ಬಿಟ್ಟಿತ್ತು. ಒಟ್ಟು ಮೂರು ಗಡಿ ಕೇಂದ್ರಗಳಿಂದ (ತಲಪಾಡಿ, ಸಾರಡ್ಕ, ಪಂಜಿಕಲ್ಲು) ವಿದ್ಯಾರ್ಥಿಗಳನ್ನು ಕರೆತರಲಾಯಿತು.
ಪಿಯುಸಿ ಪರೀಕ್ಷೆಗೆ ಹೋಲಿಸಿದರೆ ಸಿಇಟಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಕೊರೋನ ನಿಯಂತ್ರಣದ ಸರ್ವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಸ್ಸುಗಳಲ್ಲಿ ಕೂಡ ಸಾಮಾಜಿಕ ಅಂತರ ಪಾಲನೆಯೊಂದಿಗೆ ಕರೆತರಲಾಗಿತ್ತು.
ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದಾಗ ದೇಹದ ಉಷ್ಣತೆಯ ತಪಾಸಣೆ ಮಾಡಲಾಗಿದೆ. ಪರೀಕ್ಷಾ ಕೊಠಡಿಯೊಳಗೂ ಸಾಮಾಜಿಕ ಅಂತರ ಪಾಲನೆಯಿತ್ತು. ಮಂಗಳೂರಿನ ಶರದಾ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸೋಂಕು ನಿವಾರಕ ವ್ಯವಸ್ಥೆಯ ಮೂಲಕ ಪರೀಕ್ಷಾ ಸ್ಥಳಕ್ಕೆ ಪ್ರವೇಶಿಸಿದರು.