ಬಾಡಿಗೆ ದರ ನಿಗದಿ: ಕೋಲ್ಡ್ ಸ್ಟೋರೇಜ್ ಸಹಿತ ಸುಸಜ್ಜಿತ ಹಣ್ಣು ತರಕಾರಿ ಹೈಟೆಕ್ ಮಾರಾಟ ಕೇಂದ್ರ

Update: 2020-07-30 15:12 GMT

ಸುರತ್ಕಲ್,ಜು.30: ಮಂಗಳೂರಿನಿಂದ ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ತರಕಾರಿ, ಹಣ್ಣು ರಖಂ ವ್ಯಾಪಾರಿಗಳು ಇಲ್ಲಿ ಶಾಶ್ವತವಾಗಿ ವ್ಯಾಪಾರ ಮಾಡಲು ಬಯಸಿದ್ದು ಎಪಿಎಂಸಿ ಪ್ರಾಂಗಣದಲ್ಲೇ ನಬಾರ್ಡ್ ಮೂಲಕ 10 ಕೋ.ರೂ.ವೆಚ್ಚದ ಹೈಟೆಕ್ ಕೋಲ್ಡ್ ಸ್ಟೋರೇಜ್ ಸಹಿತ ಮಾರಾಟ ಕೇಂದ್ರ ನಿರ್ಮಿಸಲು ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಬೈಕಂಪಾಡಿ ಎಪಿಎಂಸಿಯಲ್ಲಿ ವರ್ತಕರ ಜತೆ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈಗಿನ ಎಪಿಎಂಸಿ ಪ್ರಾಂಗಣದಲ್ಲಿ ವರ್ತಕರಿಗೆ ವಾಹನ ಓಡಾಟಕ್ಕೆ ಸಮಸ್ಯೆ ಆಗದಂತೆ ಒನ್ ವೇ ವ್ಯವಸ್ಥೆ ಅಳವಡಿಕೆ, ಪರ್ಯಾಯ ರಸ್ತೆ ಅಭಿವೃದ್ಧಿ, ಈಗಿನ ಗೋದಾಮು ಬಳಿ ಜೆಲ್ಲಿಕಲ್ಲು ಹಾಕಿ ಸಮತಟ್ಟು ಮಾಡಿಕೊಡಲಾಗುವುದು. ನೀರು, ಶೌಚಾಲಯ,ವಿದ್ಯುತ್‌ನ್ನು ವರ್ತಕರಿಗೆ ಉಚಿತವಾಗಿ ನೀಡಲಾಗುತ್ತಿದೆ.

ಕೊರೋನ ಸೋಂಕು ಹಾವಳಿಯಿಂದ ವ್ಯಾಪಾರಿಗಳಿಗೂ, ಎಪಿಎಂಸಿಗೂ ಆರ್ಥಿಕವಾಗಿ ಹೊರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ನಾಲ್ಕು ತಿಂಗಳ ಉಚಿತ ವ್ಯವಸ್ಥೆಯ ಬಳಿಕ ಇದೀಗ ಮೊದಲ ಬಾರಿಗೆ ಕನಿಷ್ಠ ದರ 15,650ರೂ.ನಿಗದಿಪಡಿಸಲಾಗಿದೆ ಎಂದರು.

ಬಾಡಿಗೆ ದರ ನಿಗದಿ: ನಗರದ ಸೆಂಟ್ರಲ್ ಮಾರುಕಟ್ಟೆಯನ್ನು ಬೈಕಂಪಾಡಿಯ ಕೃಷಿ ಮಾರುಕಟ್ಟೆಯ ಪ್ರಾಂಗಣಕ್ಕೆ ಸ್ಥಳಾಂತರಿಸಿ 4 ತಿಂಗಳುಗಳು ಕಳೆದಿದ್ದರೂ ಕೂಡ ವರ್ತಕರು ಹಾಗೂ ವ್ಯಾಪಾರಸ್ಥರಿಗೆ ಎಪಿಎಂಸಿ ವತಿಯಿಂದ ಕೊರೋನ ಕಾರಣದಿಂದ ಹಾಗೂ ಜಿಲ್ಲಾಡಳಿತದ ಆದೇಶವಿದ್ದುದರಿಂದ ಉಚಿತವಾಗಿ ವ್ಯಾಪಾರ ನಡೆಸಲು ಇಲ್ಲಿಯವರೆಗೆ ವ್ಯಾಪಾರಸ್ಥರಿಗೆ ಸ್ಥಳವಕಾಶ ಕಲ್ಪಿಸಲಾಗಿತ್ತು. ಇದೀಗ ನಮಗೂ 60 ಲಕ್ಷ ರೂ.ಮಿಕ್ಕಿ ಆರ್ಥಿಕ ಹೊರೆ ಬಿದ್ದಿದೆ. ಹೀಗಾಗಿ ವರ್ತಕರಿಗೆ ಕನಿಷ್ಠ ಬಾಡಿಗೆ ದರ ನಿಗದಿಪಡಿಸುವುದು ಅನಿವಾರ್ಯವಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ತಿಳಿಸಿದರು.

ಎಪಿಎಂಸಿ ನಿಗದಿ ಮಾಡಿದ ಬಾಡಿಗೆ ದರವನ್ನು ವ್ಯಾಪಾರಸ್ಥರು ನೀಡುವುದಾಗಿ ಭರವಸೆ ನೀಡಿದರು. ವ್ಯಾಪಾರಿಗಳು ಡಿವೈಡರ್‌ನಲ್ಲಿ ವ್ಯಾಪಾರ ನಡೆಸದಂತೆ ಮನವೊಲಿಕೆ, ಲಾರಿಗಳಿಂದ ಟ್ರಾಫಿಕ್ ಜಾಂ ಆಗದಂತೆ ಅನ್‌ಲೋಡಿಂಗ್,ಕೊಳೆತ ತರಕಾರಿ ಹಣ್ಣುಗಳನ್ನು ಚರಂಡಿಯಲ್ಲಿ ಬಿಸಾಡುವುದಕ್ಕೆ ತಡೆ,ಲಾರಿ ಚಾಲಕರು ಪ್ರಾಂಗಣದೊಳಗೆ ಶೌಚ ಮಾಡದಂತೆ ಕ್ರಮ, ಕ್ಯಾಂಟೀನ್‌ನಲ್ಲಿ ತಿಂಡಿ ತಿನಿಸುಗಳಿಗೆ ದುಬಾರಿ ದರ ಇಳಿಸುವಂತೆ ಮತ್ತಿತರ ಪ್ರಮುಖ ವಿಚಾರಗಳನ್ನು ಚರ್ಚಿಸಲಾಯಿತು.

ಸಭೆಯಲ್ಲಿ ಎಪಿಎಂ ಸಿ ಉಪಾಧ್ಯಕ್ಷೆ ರಜನಿ ದುಗ್ಗಣ್ಣ, ಸದಸ್ಯರಾದ ರಾಘವ ಶೆಟ್ಟಿ,ರುಕ್ಮಯ್ಯ ನಾಯಕ್, ಸರಕಾರಿ ನಾಮನಿರ್ದೇಶನ ಸದಸ್ಯ ಪ್ರವೀಣ್ ಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಮುಸ್ತಫ, ಅಹ್ಮದ್ ಬಾವಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News