ಮಂಗಳೂರು: ಕಟ್ಟಡ ಕಾರ್ಮಿಕರಿಗೆ ಪರಿಹಾರ ಧನ ನೀಡಲು ಆಗ್ರಹಿಸಿ ಸಿಐಟಿಯು ಧರಣಿ

Update: 2020-07-30 15:14 GMT

ಮಂಗಳೂರು, ಜು.30: ಕೋವಿಡ್-19 ಕೊರೋನ ವೈರಸ್ ನಿಗ್ರಹಿಸಲು ರಾಜ್ಯ ಸರಕಾರ 2ನೇ ಬಾರಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಸಿಗದಂತಹ ವಾತಾವರಣ ಸೃಷ್ಟಿಯಾಗಿದೆ. ಹೆಚ್ಚಿನ ಕಟ್ಟಡ ಕಾರ್ಮಿಕರಿಗೆ ವಾಹನ ಸಂಪರ್ಕವಿಲ್ಲದೆ ಕೆಲಸ ಇಲ್ಲದಂತಾಗಿದೆ. ಹಾಗಾಗಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಲಾಕ್‌ಡೌನ್ ಪರಿಹಾರ 5,000 ರೂ. ಸೇರಿಸಿ ಪ್ರತೀ ತಿಂಗಳಿಗೆ 2,000 ರೂ.ದಂತೆ ಮುಂದಿನ ಮೂರು ತಿಂಗಳ ತನಕ ಪರಿಹಾರ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಧರಣಿ ನಡೆಸಿದೆ.

ಮಂಗಳೂರು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಮುಂದೆ ಗುರುವಾರ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಈ ಬೇಡಿಕೆಯಲ್ಲದೆ 5,000 ರೂ.ವನ್ನು ಇನ್ನೂ ಪಡೆದಿರದಂತಹ ಕಾರ್ಮಿಕರಿಗೆ ಕೂಡಲೇ ನೀಡಬೇಕು, ಈ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗದಿರುವ ಕಾರ್ಮಿಕರಿಗೆ ಮಾಹಿತಿ ನೀಡಲು ಇನ್ನಷ್ಟು ಕಾಲಾವಕಾಶ ನೀಡಬೇಕು. ಸೇವಾಸಿಂಧುನಲ್ಲಿ ನಡೆಯುವಂತಹ ಭ್ರಷ್ಟಾಚಾರವನ್ನು ತಡೆಗಟ್ಟಬೇಕು, ಕಾರ್ಮಿಕ ಇಲಾಖೆಯಲ್ಲಿ ಕೊರತೆಯಿರುವಂತಹ ಸಿಬ್ಬಂದಿ ನೇಮಕಾತಿ ಆಗಬೇಕು ಎಂದು ಒತ್ತಾಯಿಸಿದರು.

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಸಂತ ಆಚಾರಿ, ಪ್ರಧಾನ ಕಾರ್ಯದರ್ಶಿ ಯು.ಜಯಂತ ನಾಯ್ಕ, ನಾಯಕರಾದ ರವಿಚಂದ್ರ ಕೊಂಚಾಡಿ, ಕೆ.ಪಿ.ಜೋನಿ, ಜನಾರ್ದನ ಕುತ್ತಾರ್, ಸದಾಶಿವ ದಾಸ್, ಅಶೋಕ್ ಶ್ರೀಯಾನ್, ಪಾಂಡುರಂಗ, ದಯಾನಂದ ಶೆಟ್ಟಿ, ಕೃಷ್ಣಪ್ಪಮೂಡುಬಿದಿರೆ, ದಿನೇಶ್ ಶೆಟ್ಟಿ, ವಸಂತಿ, ಯಶೋಧ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News