×
Ad

ತಲಪಾಡಿ: ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆಯ ಸಭೆ

Update: 2020-07-30 22:14 IST

ಉಳ್ಳಾಲ, ಜು.30: ಜಿಲ್ಲೆಯಲ್ಲಿ ಕೋವಿಡ್ ನಿಂದ ಹಲವು ಮಂದಿ ಜೀವ ಕಳೆದುಕೊಂಡರೂ ಸರ್ಕಾರ ಮತ್ತು ವೈದ್ಯರು ರೋಗಿಗಳಿಗೆ ಸ್ಪಂದಿಸುವ ಕಾರ್ಯ ಇನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿ ತಲಪಾಡಿ ಗ್ರಾಮ ವ್ಯಾಪ್ತಿಯ ಕೋವಿಡ್ ಕಾರ್ಯಪಡೆಯ ಸದಸ್ಯರೊಬ್ಬರು ವೈದ್ಯಾಧಿಕಾರಿ ಗೋಪಿ ಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ತಲಪಾಡಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾ.ಪಂ. ಕಚೇರಿಯಲ್ಲಿ ಬುಧವಾರ ನಡೆದ ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಬುಧವಾರ ನಡೆಯಿತು.

ಸರ್ಕಾರ ಇಂತಿಷ್ಟು ಕೋಟಿ ಹಣ ಕೊರೋನ ಚಿಕಿತ್ಸೆಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಿದೆ. ಆದರೆ ಇದರ ಪ್ರಯೋಜನ ಯಾರಿಗೂ ಸಿಕ್ಕಿಲ್ಲ. ಮೃತ ಕುಟುಂಬಸ್ಥರಿಗೆ ಪರಿಹಾರ ಸಿಗಲಿಲ್ಲ. ಅಲ್ಲದೇ ರೋಗಿಗೆ ಸರಿಯಾದ ಚಿಕಿತ್ಸೆ, ಔಷಧಿ ಯಾಕೆ ನೀಡುತ್ತಿಲ್ಲ ಎಂದು ಸಭಿಕರು ಪ್ರಶ್ನಿಸಿದರು.

ಈ ಸಂದರ್ಭ ವೈದ್ಯಾಧಿಕಾರಿಯವರು ಸರ್ಕಾರದ ನಿಯಮಗಳ ಜೊತೆಗೆ ಕೆಲವು ಆರೋಗ್ಯಕರ ಮಾಹಿತಿ ನೀಡಿದರು. ಕೋವಿಡ್ ಜಿಲ್ಲೆಯಲ್ಲಿ ದೊಡ್ಡ ಪರಿಣಾಮ ಬೀರಿದರೂ ತಲಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಕೇವಲ 14 ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಈ ವೈರಸ್ ಹರಡದಂತೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಅವರು ಕರೆ ನೀಡಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ಕೊರೋನ ಸೋಂಕು ಈಗ ಗ್ರಾಮೀಣ ಪ್ರದೇಶದಕ್ಕೂ ತಲುಪಿದೆ. ಸರ್ಕಾರ ಈಗ ರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ರೋಗಿಗಳು ಆಧಾರ್ ಕಾರ್ಡ್ ಅಥವಾ ರೇಶನ್ ಕಾರ್ಡ್ ಜೊತೆ ಸರ್ಕಾರಿ ಆಸ್ಪತ್ರೆಗೆ ತೆರಳಿದರೆ ಎಲ್ಲಾ ವ್ಯವಸ್ಥೆ ಸಿಗುತ್ತದೆ. ಈ ವಿಚಾರದಲ್ಲಿ ಚರ್ಚೆ ಮಾಡುವ ಬದಲು ಜಾಗೃತಿ ಮೂಡಿಸುವ ಕೆಲಸ ನಾವು ಮಾಡಬೇಕು‌ ಎಂದು ಹೇಳಿದರು. 

ಗ್ರಾಮದಲ್ಲಿ ಕೊರೊನ ತೀವ್ರಗೊಳ್ಳದಂತೆ ಸೂಕ್ತ ವ್ಯವಸ್ಥೆ ಮಾಡಿದ್ದೇವೆ. ಪ್ರತಿ ವಾರ್ಡ್ ಗಳಿಗೆ ನೇಮಕ ಮಾಡಲಾದ ಕೊರೋನ ವಾರಿಯರ್ಸ್ ಕಾರ್ಯ ನಿರಂತರವಾಗಿರಬೇಕು. ಎಲ್ಲರ ಸಹಕಾರ ಇದ್ದರೆ ಕಾರ್ಯ ಯಶಸ್ವಿಯಾಗುತ್ತದೆ ಎಂದು ಗ್ರಾಂ.ಪಂ.ಪಿಡಿಓ ಕೇಶವ ಪೂಜಾರಿ ಹೇಳಿದರು.

ಸಭೆಯಲ್ಲಿ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಕೊರೊನ ನಿಯಂತ್ರಿಸುವ ನಿಟ್ಟಿನಲ್ಲಿ ಆಯ್ಕೆ ಮಾಡಲಾದ 18 ಕೊರೋನ ವಾರಿಯರ್ಸ್ ಪೈಕಿ ಸಭೆಯಲ್ಲಿ ಆರು ಮಂದಿ ಹಾಜರಾಗಿದ್ದರು. 

ಈ ಸಂದರ್ಭ ತಾ.ಪಂ‌ ಸದಸ್ಯ ಸಿದ್ದೀಕ್ ತಲಪಾಡಿ, ಸುರೇಖಾ ಚಂದ್ರ ಹಾಸ್, ತಲಪಾಡಿ ಗ್ರಾ.ಪಂ.ಆಡಳಿತಾಧಿಕಾರಿ ಸುಷ್ಮಿತಾ, ವೈದ್ಯಾಧಿಕಾರಿ  ಗೋಪಿ ಪ್ರಕಾಶ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News