ಕೊರೋನ ಮಾರ್ಗಸೂಚಿ ಪಾಲಿಸಿದರೆ ಅಯೋಧ್ಯೆ ಕಾರ್ಯಕ್ರಮದಲ್ಲಿ ಮೋದಿ, ಅಡ್ವಾಣಿ, ಭಾಗವತ್ ಭಾಗವಹಿಸುವಂತಿಲ್ಲ!

Update: 2020-07-30 18:10 GMT

ಹೊಸದಿಲ್ಲಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸಿದರೆ ಮುಂದಿನ ವಾರ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರಾದ ಮುರಳಿ ಮನೋಹರ್ ಜೋಶಿ, ಎಲ್.ಕೆ ಅಡ್ವಾಣಿ ಮತ್ತು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಅವರಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು theprint.in ವರದಿ ಮಾಡಿದೆ.

“65 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವರರು ಮತ್ತು 10 ವರ್ಷಕ್ಕಿಂತ ಕೆಳಗಿನ ವಯಸ್ಸಿನರು ಮನೆಯಲ್ಲೇ ಇರುವಂತೆ ಸಲಹೆ ನೀಡಲಾಗಿದೆ. ಧಾರ್ಮಿಕ ಕೇಂದ್ರಗಳನ್ನು ನಿರ್ವಹಿಸುವ ಸಂಸ್ಥೆಗಳು ಇದನ್ನು ಪಾಲಿಸಬೇಕು” ಎಂದು ಮಾರ್ಗಸೂಚಿಗಳು ತಿಳಿಸಿವೆ.

ಅನ್ ಲಾಕ್ 3 ಬಗ್ಗೆ ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿಯಲ್ಲೂ 65 ವರ್ಷ ವಯಸ್ಸಿನವರಿಗಿಂತ ಮೇಲಿನವರು ಮನೆಯಲ್ಲೇ ಇರುವಂತೆ ಸಲಹೆ ನೀಡಲಾಗಿದೆ.

ಆದರೆ ರಾಮ ಮಂದಿರ ಭೂಮಿ ಪೂಜೆಗೆ ಆಹ್ವಾನಿಸಿದವರಲ್ಲಿ ಪ್ರಧಾನಿ ಮೋದಿ (69), ಮುರಳಿ ಮನೋಹರ್ ಜೋಷಿ (86), ಎಲ್.ಕೆ. ಅಡ್ವಾಣಿ (92), ಮೋಹನ್ ಭಾಗವತ್ (69), ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ (73) ಮತ್ತು ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ (88) 65 ವರ್ಷಕ್ಕಿಂತ ಮೇಲ್ಪಟ್ಟವರು.

ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿ ಉತ್ತರ ಪ್ರದೇಶ ಸರಕಾರಕ್ಕೆ ಯಾವುದಾದರೂ ಮಾರ್ಗಸೂಚಿಗಳನ್ನು ನೀಡಲಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು, ‘ಆರೋಗ್ಯ ಸಚಿವಾಲಯ ಈಗಾಗಲೇ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದು ಸಾರ್ವಜನಿಕವಾಗಿ ಲಭ್ಯವಿದೆ” ಎಂದು ಹೇಳಿರುವುದಾಗಿ theprint.in  ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News