ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮದ ಹೇಳಿಕೆ ಕಾನೂನು ಬಾಹಿರವೇ: ಪಿಎಫ್‌ಐ ಪ್ರಶ್ನೆ

Update: 2020-07-30 17:15 GMT

ಉಡುಪಿ, ಜು.30: ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿಕೆ ನೀಡಿದ್ದ ಉಡುಪಿ ಜಿಲ್ಲಾಧಿಕಾರಿಯವರು ನಂತರ ನಾನು ಅಂತಹ ಹೇಳಿಕೆ ನೀಡಿಯೇ ಇಲ್ಲ, ಅಧಿಕಾರಿಗಳ ಕಣ್ತಪ್ಪಿನಿಂದಾಗಿ ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂಬ ಸಮಜಾಯಿಷಿ ನೀಡಿದ್ದನ್ನು ಗಮನಿಸಿದರೆ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಎಂಬ ಹೇಳಿಕೆ ಕಾನೂನು ಬಾಹಿರವೇ ಎಂಬ ಪ್ರಶ್ನೆ ಮೂಡುವಂತಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಹೇಳಿದ್ದಾರೆ.

ಕಾನೂನು ಬದ್ಧ ಮತ್ತು ಸಂವಿಧಾನ ಬದ್ದವಾದ ಹೇಳಿಕೆ ನೀಡಿದ್ದ ಉಡುಪಿ ಜಿಲ್ಲಾಧಿಕಾರಿಯವರು ನಂತರ ಅದನ್ನು ಹಿಂಪಡೆಯಲು ಬಿಜೆಪಿ ನಾಯಕರ ಒತ್ತಡವೇ ನೇರ ಕಾರಣ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸಕ್ರಮ ಮತ್ತು ಅಕ್ರಮದ ವ್ಯಾಖ್ಯಾನವನ್ನು ಅದಲು ಬದಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ದಕ್ಷತೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಅಧಿಕಾರಿಗಳನ್ನು ರಾಜಕೀಯ ಒತ್ತಡ ತಂದು ಸಂಘಪರಿವಾರದ ಅಜೆಂಡಾಗಳನ್ನು ಈಡೇರಿಸಲು ತಮಗೆ ಬೇಕಾದ ಹಾಗೆ ಕೆಲಸ ಮಾಡಿಸುತ್ತಿರುವುದನ್ನು ಖಂಡಿತವಾಗಿಯು ಒಪ್ಪಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯವರು ತಮ್ಮ ಹೇಳಿಕೆಯನ್ನು ಹಿಂಪಡೆದಿರುವುದರಿಂದ ಸಂಘ ಪರಿವಾರದ ಗೂಂಡಾಗಳಿಗೆ ಗೋಸಾಗಾಟಗಾರರ ಮೇಲೆ ದಾಳಿ ಮಾಡಲು ಧೈರ್ಯ ಮತ್ತು ಪರೋಕ್ಷವಾಗಿ ಅನುಮತಿ ನೀಡಿದಂತಾಗಿದೆ. ಇದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣವಾಗಬಹುದು. ಹಾಗಾಗಿ ಜಿಲ್ಲಾಧಿಕಾರಿಯವರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಾಜ ಘಾತುಕರ ವಿರುದ್ಧ ಸಂವಿಧಾನ ಬದ್ದ ಹೇಳಿಕೆ ನೀಡಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯಬಾರದೆಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News